ಪ. ಬಂಗಾಳ ಪಂಚಾಯತ್ ಚುನಾವಣೆ: ಅತ್ಯಾಧಿಕ ಗ್ರಾಮ ಪಂಚಾಯತ್ ಗಳನ್ನು ತೆಕ್ಕೆಗೆ ಹಾಕಿಕೊಂಡ ತೃಣಮೂಲ ಕಾಂಗ್ರೆಸ್; ಎರಡನೇ ಸ್ಥಾನದಲ್ಲಿ ಬಿಜೆಪಿ

ಕೊಲ್ಕತ್ತಾ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಶ್ಚಿಮ ಬಂಗಾಳದಾದ್ಯಂತ ಒಟ್ಟು 63,229 ಗ್ರಾಮ ಪಂಚಾಯಿತಿ ಸ್ಥಾನಗಳಲ್ಲಿ 42,097 ಸ್ಥಾನಗಳನ್ನು ಗೆದ್ದಿದೆ ಎಂದು ರಾಜ್ಯ ಚುನಾವಣಾ ಆಯೋಗದ (ಎಸ್‌ಇಸಿ) ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಬಿಜೆಪಿ 9,223 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇತರರಲ್ಲಿ, ಎಡರಂಗ 3,021 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 2,430 ಸ್ಥಾನಗಳನ್ನು ಪಡೆದುಕೊಂಡಿದೆ. ಇತರೆ ಹಾಗೂ ಸ್ವತಂತ್ರ ಅಭ್ಯರ್ಥಿಗಳು 2,866 ಸ್ಥಾನಗಳನ್ನು ಗೆದ್ದಿದ್ದಾರೆ.

ಗ್ರಾಮ ಪಂಚಾಯಿತಿಗಳ ಸಂಖ್ಯೆಗೆ ಸಂಬಂಧಿಸಿದಂತೆ, ಒಟ್ಟು 3,317 ರಲ್ಲಿ 2,562 ರಲ್ಲಿ ಟಿಎಂಸಿ ಗೆದ್ದಿದೆ. ಬಿಜೆಪಿ 212 ಗ್ರಾಮ ಪಂಚಾಯತಿಗಳಲ್ಲಿ ಜಯಗಳಿಸಿದರೆ, ಎಡರಂಗ 42, ಕಾಂಗ್ರೆಸ್ 17 ಮತ್ತು ಐಎಸ್‌ಎಫ್ 8 ರಲ್ಲಿ ಗೆಲುವು ಸಾಧಿಸಿದೆ. 83 ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಇತರೆ ಪಕ್ಷಗಳು ಮುನ್ನಡೆ ಸಾಧಿಸಿವೆ. ಕುತೂಹಲಕಾರಿಯಾಗಿ, 263 ಗ್ರಾಮ ಪಂಚಾಯತಿಗಳಲ್ಲಿ ಅತಂತ್ರ ಸ್ಥಿತಿ ಏರ್ಪಟ್ಟಿದ್ದರೆ ಉಳಿದ ಕ್ಷೇತ್ರಗಳ ಮತ ಎಣಿಕೆ ಇನ್ನೂ ನಡೆಯುತ್ತಿದೆ.

ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಹಿಂಸಾಚಾರ ಪ್ರಕರಣಗಳು ವರದಿಯಾಗಿದ್ದು, ಮತಗಟ್ಟೆ ಧ್ವಂಸ ಪ್ರಕರಣ ಸಮೇತ ಹಿಂಸಾಚಾರದಲ್ಲಿ 40 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮತಪೆಟ್ಟಿಗೆಗಳನ್ನು ಧ್ವಂಸ ಮಾಡಿರುವ ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವ ಬಗ್ಗೆಯೂ ವರದಿಗಳಾಗಿವೆ.