ತೀರ್ಥಹಳ್ಳಿ: ಅರಣ್ಯ ಪ್ರದೇಶದಲ್ಲಿ ಗುಂಡು ತಗುಲಿ ಬಿಜೆಪಿ ಮುಖಂಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಾಂತರಾಜ್ (44) ಎಂಬವರು ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥ ಬಳಿ ನಡೆದಿದೆ. ಘಟನಾ ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ದೌಡಾಯಿಸಿದ್ದಾರೆ.
ಅಂಬುತೀರ್ಥ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಗುಂಡೇಟು ತಗುಲಿದ ಕಾಂತರಾಜ್ ಅವರು ಬಿದ್ದು ಚೀರಾಡುತ್ತಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.
ಕಾಂತರಾಜ್ ಅವರು ಅಂಬುತೀರ್ಥ ಬಳಿ ಪ್ರಾಣಿ ಶಿಕಾರಿಗೆ ತೆರಳಿದ್ದರು ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಸುದ್ದಿ ತಿಳಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.