ಮಣಿಪಾಲದಲ್ಲಿ ತಿರಂಗ ಯಾತ್ರೆ: ದೇಶಭಕ್ತಿ ಮೂಡಿಸುವ ಸಂದೇಶ


ಉಡುಪಿ: ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸುವ ಹಾಗೂ ನಾಗರಿಕರಲ್ಲಿ ದೇಶಭಕ್ತಿಯ ಭಾವನೆ ಮೂಡಿಸುವ ಉದ್ದೇಶದಿಂದ ಉಡುಪಿ ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಬುಧವಾರ ಸಂಜೆ ಮಣಿಪಾಲದಲ್ಲಿ ತಿರಂಗ ಯಾತ್ರೆ ನಡೆಯಿತು.

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಗಣ್ಯರೊಂದಿಗೆ ತ್ರಿವರ್ಣ ಧ್ವಜದ ಬಣ್ಣಗಳ ಬಲೂನುಗಳನ್ನು ಹಾರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ದೇಶ ಮೊದಲು’ ಎಂಬ ಧ್ಯೇಯದೊಂದಿಗೆ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಸ್ವಾತಂತ್ರ್ಯೋತ್ಸವದ ಸಂಭ್ರಮ ಕೇವಲ ಸರ್ಕಾರಿ ಕಚೇರಿಗಳು ಹಾಗೂ ಕಾಲೇಜುಗಳಿಗೆ ಸೀಮಿತವಾಗದೆ ಪ್ರತಿಯೊಬ್ಬ ನಾಗರಿಕರೂ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ‘ಹರ್ ಘರ್ ತಿರಂಗ’ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ದೇಶದ ಏಕತೆ ಮತ್ತು ಒಗ್ಗಟ್ಟನ್ನು ಬಲಪಡಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಶಿಕ್ಷಣ ಸಂಸ್ಥೆಗಳು, ಸಂಘ–ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳನ್ನು ಒಳಗೊಂಡು ತಿರಂಗ ಯಾತ್ರೆ ಆಯೋಜಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ದೇಶದ ಕುರಿತು ಚಿಂತನೆ ಹಾಗೂ ರಾಷ್ಟ್ರಭಕ್ತಿಯ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ ಎಂದರು.

ಮಣಿಪಾಲದ ಗೋಲ್ಡನ್ ಜುಬಿಲೀ ಹಾಲ್ ಬಳಿಯ ಕೆನರಾ ಬ್ಯಾಂಕ್ ವೃತ್ತ ಕಚೇರಿ ಬಳಿಯಿಂದ ಆರಂಭವಾದ ಯಾತ್ರೆಯು ಟೈಗರ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಮೂಲಕ ಸಾಗಿ ಮಣಿಪಾಲ ಕಾಯಿನ್ ಸರ್ಕಲ್ ಬಳಿ ಸಮಾಪನಗೊಂಡಿತು.

ಯಾತ್ರೆಯಲ್ಲಿ ಉಡುಪಿ–ಮಣಿಪಾಲ ಭಾಗದ ವಿವಿಧ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಡಾ. ಕೃಷ್ಣ ಪ್ರಸಾದ್, ಡಾ. ಚಂದ್ರಶೇಖರ್, ಡಾ. ವಿಜಯೇಂದ್ರ, ಜಯಕರ ಶೆಟ್ಟಿ ಇಂದ್ರಾಳಿ, ಅಜಯ್ ಪಿ. ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ದಿನೇಶ್ ಅಮೀನ್, ಉಮೇಶ್ ನಾಯ್ಕ್ ಚೇರ್ಕಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.