ನ್ಯಾಯಾಲಯಕ್ಕೆ ಹಾಜರಾದ ತಿಮರೋಡಿ: ಎರಡು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ

ಉಡುಪಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು.

ತನಿಖಾಧಿಕಾರಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಅಶೋಕ್ ಮಾಳಬಗಿ ಸಹಿತ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನ್ಯಾಯಲಯಕ್ಕೆ ಹಾಜರುಪಡಿಸಲಾಯಿತು. ಮಹೇಶ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಕಸ್ಟಡಿಗೆ ಕೇಳಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 1.30ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಎರಡು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದರು. 3:40ಕ್ಕೆ ನ್ಯಾಯಾಲಯಕ್ಕೆ ಮತ್ತೆ ಹಾಜರುಪಡಿಸಲು ಸೂಚನೆ ನೀಡಿದರು.

ಈ ವೇಳೆ ತನಿಖಾಧಿಕಾರಿಯನ್ನು ನ್ಯಾಯಾಧೀಶರು ತೀವ್ರ ತರಾಟೆಗೆ ತೆಗೆದುಕೊಂಡರು. ಮೊನ್ನೆ ಯಾವ ಕಾರಣಕ್ಕೆ ಪೊಲೀಸ್ ಕಸ್ಟಡಿಗೆ ಕೇಳಿಲ್ಲ. ಕಸ್ಟಡಿಗೆ ಬೇಕಿದ್ದರೆ ಬೆಳಿಗ್ಗೆಯೇ ಹಾಜರುಪಡಿಸಬೇಕಿತ್ತು. ಮಹಜರು, ರಿಕವರಿ ಏನೇ ಇದ್ದರೂ ಎರಡು ಗಂಟೆಯಲ್ಲಿ ಪೂರ್ಣಗೊಳಿಸಿ ಎಂದು ತಾಕೀತು ಮಾಡಿದರು.