ಸಾಮಾನ್ಯವಾಗಿ ಪ್ರಾಣಿಗಳು ಮನುಷ್ಯರಂತೆ ಕುಟುಂಬ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಮನುಷ್ಯನಂತೆ ಪ್ರಾಣಿಗಳಿಗೆ ಸಂಸಾರದ ಬಂಧನವಿಲ್ಲ. ಪ್ರಾಣಿ ಪ್ರಪಂಚದಲ್ಲಿ ಮಕ್ಕಳ ಲಾಲನೆ ಪಾಲನೆ ಎಲ್ಲವೂ ಹೆತ್ತಮ್ಮನದ್ದೇ ಆಗಿರುತ್ತದೆ. ಮರಿಯು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವವರೆಗೂ ಅದರ ರಕ್ಷಣೆಯ ಜವಾಬ್ದಾರಿ ಹೊರುವ ತಾಯಿ, ಮರಿ ಸ್ವಾವಲಂಬಿ ಆದ ತಕ್ಷಣ ಅದನ್ನು ಅದರ ಪಾಡಿಗೆ ಬಿಟ್ಟು ಬಿಡುತ್ತದೆ. ಒಂದು ವೇಳೆ ತಾಯಿ ಸತ್ತು ಹೋಯಿತೆಂದರೆ ಆ ಮರಿಯ ಜವಾಬ್ದಾರಿ ಅದರದ್ದೇ ಆಗಿರುತ್ತದೆ.
ಆದರೆ, ಕಾಡಿನಲ್ಲೊಂದು ಅಪರೂಪದ ಘಟನೆ ನಡೆದಿದೆ. ಇಲ್ಲಿ ತನ್ನ ಸಹೋದರಿ ಹುಲಿಯ ಸಾವಿನ ನಂತರ ಹೆಣ್ಣು ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಸತ್ತ ತನ್ನ ಸಹೋದರಿಯ ಮೂರು ಮರಿಗಳನ್ನೂ ನೋಡಿಕೊಳ್ಳಲು ಪ್ರಾರಂಭಿಸಿದೆ. ಇಂತಹ ಅಪರೂಪದ ದೃಶ್ಯವನ್ನು ಇತ್ತೀಚೆಗೆ ಅರಣ್ಯ ಇಲಾಖೆ ಛಾಯಾಗ್ರಹಣ ಮಾಡಿದೆ ಮತ್ತು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ ನಂದಾ ಇದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
Tigress takes care of 3 cubs of her dead sister along with 4 of her own. It is also reported that she gives precedence during hunting to the cubs of her sister. Rare.
(Source:Forest Department) pic.twitter.com/V5wK28Qlgy
— Susanta Nanda (@susantananda3) August 22, 2022
“ಹುಲಿಯು ತನ್ನ ಸತ್ತ ಸಹೋದರಿಯ 3 ಮರಿಗಳೊಂದಿಗೆ ತನ್ನ 4 ಮರಿಗಳನ್ನು ನೋಡಿಕೊಳ್ಳುತ್ತದೆ. ಬೇಟೆಯಾಡುವ ಸಮಯದಲ್ಲಿ ಹುಲಿ ತನ್ನ ಸಹೋದರಿಯ ಮರಿಗಳಿಗೆ ಆದ್ಯತೆ ನೀಡುತ್ತದೆ ಎಂದು ವರದಿಯಾಗಿದೆ. ಅಪರೂಪ.” ಎಂದು ಅವರು ಬರೆದುಕೊಂಡಿದ್ದಾರೆ.
ತಮ್ಮ ತಾಯಿಯನ್ನು ವಯಸ್ಕ ಹುಲಿ ಬೇಟೆಯಾಡಿದಾಗ ಮರಿಗಳಿಗೆ ಕೇವಲ 9 ತಿಂಗಳ ವಯಸ್ಸಾಗಿತ್ತು. ಅಂದಿನಿಂದ, ಚಿಕ್ಕಮ್ಮ ಅನಾಥ ಮರಿಗಳನ್ನು ನೋಡಿಕೊಳ್ಳಲು ಪ್ರಾರಂಭಿಸಿತು ಮತ್ತು ಕಾಡಿನ ಜೀವನದ ಕಠಿಣ ಮಾರ್ಗಗಳನ್ನು ಸಹ ಕಲಿಸಿತು. ಕಾಡಿನಲ್ಲಿ ಇದೊಂದು ಅಪರೂಪದ ಘಟನೆ ಎಂದು ಅವರು ಹೇಳಿದ್ದಾರೆ.
ಸಹೃದಯತೆ ಎನ್ನುವುದು ಕೇವಲ ಮನುಷ್ಯನಿಗೆ ಮೀಸಲು, ಪ್ರಾಣಿಗಳು ನಿರ್ದಯಿಗಳು ಎನ್ನುವ ಭಾವನೆ ಜನರಲ್ಲಿ ಬೇರೂರಿದೆ. ಆದರೆ, ನಿಜವೆಂದರೆ ಮನುಷ್ಯನಿಗಿಂತಲೂ ಪ್ರಾಣಿಗಳೇ ಸಹೃದಯಿಗಳು. ಏಳು ಮಕ್ಕಳನ್ನೂ ಸಾಕಿ ಸಲಹುತ್ತಿರುವ ಈ ಹುಲಿಯಮ್ಮನೆ ಅದಕ್ಕೆ ಸಾಕ್ಷಿ












