ಕೊಂಕಣ ರೈಲ್ವೆಯಲ್ಲಿ ಟಿಕೆಟ್ ರಹಿತ ಪ್ರಯಾಣ; 2.37 ಕೋಟಿ ರೂ. ದಂಡ ವಸೂಲಿ

ಉಡುಪಿ: ಟಿಕೆಟ್‌ ರಹಿತ ಪ್ರಯಾಣಿಕರ ಪತ್ತೆಗಾಗಿ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ಅಭಿಯಾನವನ್ನು ಕೈಗೊಂಡಿರುವ ಕೊಂಕಣ ರೈಲ್ವೆ ನಿಗಮವು ಈ ವರ್ಷ ಇದುವರೆಗೆ ಒಟ್ಟು 2,37,11,161 ರೂ.ಗಳನ್ನು ದಂಡ ರೂಪದಲ್ಲಿ ವಸೂಲಿ ಮಾಡಿದೆ ಎಂದು ನಿಗಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಇಂದಿನವರೆಗೆ ಒಟ್ಟು 3,765 ಟಿಕೇಟ್ ರಹಿತ ಪ್ರಯಾಣಿಕರ ತಪಾಸಣಾ ಅಭಿಯಾನ ಕೈಗೊಳ್ಳಲಾಗಿದೆ. ಈ ವೇಳೆ 40,602 ಮಂದಿ ಅನಧಿಕೃತವಾಗಿ ಸಂಚರಿಸುವವರನ್ನು ಹಾಗೂ ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಂಚಿ, ದಂಡ ವಿಧಿಸಿದ್ದು, ಇವರಿಂದ ಒಟ್ಟಾರೆಯಾಗಿ 2.37 ಕೋಟಿ ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ದಿನಗಳಲ್ಲಿ ಗಣೇಶ ಚತುರ್ಥಿ ಸೇರಿದಂತೆ ಹಬ್ಬದ ದಿನಗಳು ಬರುವ ಕಾರಣ ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ನಿರೀಕ್ಷೆ ಇದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರು ಅಧಿಕೃತವಾದ ಟಿಕೆಟ್ ಪಡೆದು ಸಂಚರಿಸುವಂತೆ ವಿನಂತಿಸಿರುವ ರೈಲ್ವೆ ಅಧಿಕಾರಿಗಳು, ಈ ಮೂಲಕ ಕೆಆರ್‌ಸಿಎಲ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಪ್ರಯಾಣದ ವೇಳೆ ಆಗಬಹುದಾದ ಯಾವುದೇ ರೀತಿಯ ತೊಂದರೆಗಳನ್ನು ತಪ್ಪಿಸುವಂತೆ ಕೋರಿದೆ.

ಕೆಆರ್‌ಸಿಎಲ್, ಮುಂದೆಯೂ ಟಿಕೆಟ್ ರಹಿತ ಪ್ರಯಾಣಿಕರ ಪತ್ತೆಗೆ ಮುಂಬಯಿಯಿಂದ ಮಂಗಳೂರುವರೆಗಿನ ತನ್ನ ವ್ಯಾಪ್ತಿಯ ಮಾರ್ಗದಲ್ಲಿ ಟಿಕೆಟ್ ಚೆಕ್ಕಿಂಗ್ ಅಭಿಯಾನವನ್ನು ಮುಂದುವರಿಸಲಿದ್ದು, ಹಬ್ಬದ ಆಸುಪಾಸಿನ ದಿನಗಳಲ್ಲಿ ಇದು ಇನ್ನಷ್ಟು ತೀವ್ರವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.