ಬೆಂಗಳೂರು: ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆಂದು ಆರೋಪಿಸಿ 500ಕ್ಕೂ ಅಧಿಕ ದುಷ್ಕರ್ಮಿಗಳ ಗುಪೊಂದು ಪುಲಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಕಲ್ಲು ತೂರಾಟ ನಡೆಸಿ ಬೆಂಕಿಹಚ್ಚಿದ ಘಟನೆ ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿ ನಡೆದಿದೆ.
ಶಾಸಕನ ತಂಗಿ ಮಗ ಮಹಮ್ಮದ್ ಪೈಗಂಬರ್ ರ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆಂದು ಆರೋಪಿಸಿ ಈ ದಾಂಧಲೆ ನಡೆಸಿದ್ದಾರೆ. ರಸ್ತೆಯಲ್ಲಿರುವ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಠಾಣೆ ಮುಂದೆ ಉದ್ರಿಕ್ತ ಜನರ ಗುಂಪು ಜಮಾಯಿಸಿದೆ. ಶಾಸಕರ ಮನೆಗೆ ಮಾತ್ರವಲ್ಲದೆ ಅವರ ಸಂಬಂಧಿಯ ಮನೆಗೂ ಕಿಡಿಗೇಡಿಗಳು ಬೆಂಕಿಯನ್ನು ಹಚ್ಚಿದ್ದರು. ದಕ್ಷಿಣ ವಲಯ ಡಿಸಿಪಿ ವಾಹನವೂ ಜಖಂ ಗೊಂಡಿದೆ. ವರದಿಗೆ ತೆರಳಿದ ಮಾಧ್ಯಮ ಪ್ರತಿನಿಧಿಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ.
ಗೋಲಿಬಾರ್: ಮೂವರು ಮೃತ:
ಬೆಂಗಳೂರಿನ ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಪರಿಸ್ಥಿತಿ ನಿಯಂತ್ರಣಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆ ವೇಳೆ ಮೂವರು ದುಷ್ಕರ್ಮಿಗಳಿಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ. ಐವರ ಸ್ಥಿತಿ ಗಂಭೀರ ವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನೂರಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ, ಗಲಭೆಕೋರರ ಹೆಡೆಮುರಿಕಟ್ಟಲು ಖಡಕ್ ಸೂಚನೆ ನೀಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.












