ಸುರತ್ಕಲ್: ಡಿಸೆಂಬರ್ 24 ರಂದು ಕಾಟಿಪಳ್ಳದಲ್ಲಿ ನಡೆದ ಜಲೀಲ್ ಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಸೋಮವಾರದಂದು ತಿಳಿಸಿದ್ದಾರೆ.
ಬಂಧಿತರನ್ನು ಕೃಷ್ಣಾಪುರದ ಶೈಲೇಶ್ ಪೂಜಾರಿ (21), ಹೆಜಮಾಡಿಯ ಸವಿನ್ ಕಾಂಚನ್ (24) ಮತ್ತು ಕಾಟಿಪಳ್ಳದ ಪವನ್ ಅಲಿಯಾಸ್ ಪಚ್ಚು (23) ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಜಲೀಲ್ ಅವರ ಫ್ಯಾನ್ಸಿ ಸ್ಟೋರ್ ಬಳಿ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಅವರನ್ನು ಇರಿದಿದ್ದಾರೆ. ಇಬ್ಬರು ಹತ್ಯೆಕೋರರನ್ನೂ ಮತ್ತು ಚೂರಿ ಇರಿತದ ನಂತರ ವರಿಗೆ ಪರಾರಿಯಾಗಲು ಸಹಾಯ ಮಾಡಿದ ಒಬ್ಬ ಆರೋಪಿಯನ್ನೂ ಬಂಧಿಸಲಾಗಿದೆ. ಇಬ್ಬರು ಹತ್ಯೆಕೋರರು ಸುರತ್ಕಲ್‌ನ ರೌಡಿ ಶೀಟರ್‌ಗಳಾಗಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗುವುದು. ಕೊಲೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾಗಿರುವ ಇನ್ನೂ ಹಲವು ಮಂದಿಯ ಬಂಧನವಾಗುವ ಸಾಧ್ಯತೆ ಇದೆ. ಈಗ ಬಂಧಿತ ಆರೋಪಿಗಳು 2021 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ತನಿಖೆ ವೇಳೆ ಮಹಿಳೆ ಸೇರಿದಂತೆ 12 ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ವಿಚಾರಣೆ ಬಳಿಕ ಮೂವರನ್ನು ಬಂಧಿಸಲಾಗಿದೆ. ಶೀಘ್ರದಲ್ಲೇ ಗುರುತಿನ ಪರೇಡ್ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮೂವರು ಆರೋಪಿಗಳನ್ನು ಮುಂದಿನ 10 ದಿನಗಳ ಕಾಲ ವಶಕ್ಕೆ ತೆಗೆದುಕೊಳ್ಳಲಾಗಿದೆ.












