ಜಮ್ಮು: ಸೋಮವಾರ ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಏಳು ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್ಕೌಂಟರ್ನ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ರಾತ್ರಿಯ ಕಾರ್ಯಾಚರಣೆಯಲ್ಲಿ ಸತ್ತವರ ಸಂಖ್ಯೆ 4 ಕ್ಕೆ ತಲುಪಿದೆ. ಭಾನುವಾರ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಹತರಾಗಿದ್ದರು. ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಮತ್ತೊಂದು ಎನ್ಕೌಂಟರ್ನಲ್ಲಿ ಅಪರಿಚಿತ ಉಗ್ರನೊಬ್ಬನನ್ನು ಮಟ್ಟ ಹಾಕಲಾಗಿದೆ.
ಭದ್ರತಾ ಪಡೆಗಳು ಪ್ರದೇಶದಲ್ಲಿ ಕಾವಲು ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಪುಲ್ವಾಮಾ ಚತ್ಪೋರಾದಲ್ಲಿ ಎನ್ಕೌಂಟರ್ ನಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗಾಗಿ ಶೋಧ ಮುಂದುವರಿದಿದ್ದು, ಕಳೆದ ಕೆಲವು ವಾರಗಳಿಂದ ಹಲವಾರು ಉಗ್ರರನ್ನು ಸದೆಬಡಿಯಲಾಗಿದೆ.
ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆ ಪ್ರಕರಣದ ಬಳಿಕ ಕಣಿವೆಯಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸಲಾಗಿದ್ದು, ಭಾರತೀಯ ಸೈನಿಕರು ಕನಿಷ್ಟವೆಂದರೂ ದಿನಕ್ಕೆರಡು ಉಗ್ರರನ್ನು ಹೊಡೆದುರುಳಿಸುತ್ತಿದ್ದಾರೆ.