ಉಳ್ಳಾಲ ಸಮುದ್ರ ತೀರದಲ್ಲಿ ದಡಕ್ಕೆ ಅಪ್ಪಳಿಸಿದ ಸಾವಿರಾರು ಮೀನುಗಳು! ಕಾರಣ ಇಲ್ಲಿದೆ

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮುದ್ರ ತೀರದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಒಂದೇ ಬಾರಿಗೆ ಸಾವಿರಾರು ಬೂತಾಯಿ ಮೀನುಗಳು ದಡಕ್ಕೆ ಅಪ್ಪಳಿಸಿದ ಪರಿಣಾಮ ಸ್ಥಳೀಯರಿಗೆ ಮೀನಿನ ಸುಗ್ಗಿಯೇ ದೊರಕಿದಂತಾಗಿದೆ. ಈ ಅಪರೂಪದ ದೃಶ್ಯವನ್ನು ನೋಡಲು ಜನರು ಮುಗಿಬಿದ್ದಿದ್ದು, ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಲಭ್ಯವಾದ ಮಾಹಿತಿಯ ಪ್ರಕಾರ, ಸಮುದ್ರದಲ್ಲಿ ಸಾಲುಸಾಲಾಗಿ ಸಂಚರಿಸುತ್ತಿದ್ದ ಬೂತಾಯಿ ಮೀನುಗಳ ದೊಡ್ಡ ಗುಂಪು, ಹಾದುಹೋಗುತ್ತಿದ್ದ ದೋಣಿಯಿಂದ ಉಂಟಾದ ಶಬ್ದಕ್ಕೆ ದಿಕ್ಕು ಬದಲಿಸಿದೆ. ಇದರಿಂದ ಮೀನುಗಳು ನೇರವಾಗಿ ಉಳ್ಳಾಲ ಸಮುದ್ರ ತೀರಕ್ಕೆ ಅಪ್ಪಳಿಸಿವೆ ಎನ್ನಲಾಗಿದೆ. ಇಂತಹ ಘಟನೆಗಳು ಕೆಲವೊಮ್ಮೆ ಮೀನುಗಳ ಗುಂಪು ಭಯಗೊಂಡು ಏಕಾಏಕಿ ದಿಕ್ಕು ಬದಲಿಸುವ ಸಂದರ್ಭಗಳಲ್ಲಿ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ.

ಮಧ್ಯಾಹ್ನ ವೇಳೆಗೆ ಸಮುದ್ರ ತೀರದಲ್ಲಿ ಮೀನಿನ ರಾಶಿ ಕಂಡ ಸ್ಥಳೀಯರು ಅಲೆಗಳ ನಡುವೆಯೇ ಮೀನುಗಳನ್ನು ಸಂಗ್ರಹಿಸಲು ಮುಂದಾದರು. ಕೆಲವರು ಚೀಲಗಳಲ್ಲಿ ತುಂಬಿಕೊಂಡು ಮನೆಗೆ ಕೊಂಡೊಯ್ದರೆ, ಇನ್ನೂ ಕೆಲವರು ಮಾರಾಟ ಮಾಡಿ ಲಾಭ ಪಡೆದಿದ್ದಾರೆ ಎನ್ನಲಾಗಿದೆ.

ಕೆಲವು ತಿಂಗಳ ಹಿಂದೆ ಉಡುಪಿಯ ಮಲ್ಪೆ ಸಮುದ್ರ ತೀರದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಇದೀಗ ಉಳ್ಳಾಲದಲ್ಲಿ ಸಾವಿರಾರು ಮೀನುಗಳು ದಡಕ್ಕೆ ಬಂದಿರುವುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಈ ದೃಶ್ಯವನ್ನು ಅನೇಕರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸಮುದ್ರ ಜೀವಿಗಳ ಇಂತಹ ಸಾಮೂಹಿಕ ಚಲನೆಗೆ ಸಮುದ್ರದ ಅಲೆಗಳ ಸ್ವರೂಪ, ಶಬ್ದ, ನೀರಿನ ಹರಿವು ಹಾಗೂ ಮೀನುಗಳ ಗುಂಪಿನ ವರ್ತನೆ ಸೇರಿದಂತೆ ಹಲವು ಕಾರಣಗಳು ಇರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.