ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಸಾಕ್ಷಾತ್ಕರಿಸಿದ ಅನ್ನಪೂರ್ಣೆ

ದೊಡ್ಡಣಗುಡ್ಡೆ: ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಧರ್ಮದರ್ಶಿ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ಶರನ್ನವರಾತ್ರಿ ಪರ್ವಕಾಲದಲ್ಲಿ ಸಹಸ್ರಾರು ಭಕ್ತರಿಗೆ ಬೆಳಗ್ಗಿನಿಂದ ರಾತ್ರಿಯವರೆಗೆ ಉಪಾಹಾರದೊಂದಿಗೆ ಅನ್ನಪ್ರಸಾದ ವಿತರಣೆ ನಡೆಯಿತು. ತರಕಾರಿ ಮುಹೂರ್ತದಿಂದ ಹಿಡಿದು ಮಹಾಸಂಪ್ರೋಕ್ಷಣೆ ತನಕ ನಡೆದ ಸಮಾರಾಧನೆಯೂ ಭಕ್ತರನ್ನು ಸಂತೃಪ್ತಿಗೊಳಿಸಿದ್ದಲ್ಲದೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಚ್ಚುಕಟ್ಟಿನ ವ್ಯವಸ್ಥೆ ಕುಡಿಯುವ ನೀರಿನಿಂದ ಹಿಡಿದು ಮಜ್ಜಿಗೆಯ ತನಕ ಗುಣಮಟ್ಟದ ಶುಚಿ-ರುಚಿಯಾದ ಪಂಚಭಕ್ಷ್ಯ ಸಹಿತವಾಗಿ ಮೃಷ್ಟಾನ್ನ ಭೋಜನವನ್ನು ಬಾಳೆ ಎಲೆಯಲ್ಲಿ ನೀಡಲಾಯಿತು.

ಅನ್ನಪೂರ್ಣ ಭೋಜನಾಲಯ, ಸರಸ್ವತಿ ಭವನ, ಆದಿಶಕ್ತಿ ಸಭಾಭವನ, ತಾತ್ಕಾಲಿಕವಾಗಿ ನಿರ್ಮಿಸಲಾದ ಆದಿಶಕ್ತಿ ಮಹಾಛತ್ರದಲ್ಲಿ ಏಕಕಾಲದಲ್ಲಿ 1,500ಕ್ಕೂ ಅಧಿಕ ಭಕ್ತರಿಗೆ ಬಡಿಸಿ ಉಣಿಸುವ ವ್ಯವಸ್ಥೆಯನ್ನು ಅಚ್ಚುಕಟ್ಟಾಾಗಿ ನಿರ್ವಹಿಸಲಾಯಿತು.
ವಿಜಯದಶಮಿ ಪರ್ವಕಾಲದ ಅನ್ನಸಂತರ್ಪಣೆಯಲ್ಲಿ ಪಂಚ ಭಕ್ಷ್ಯ ಪರಮಾನ್ನವನ್ನು ಭಕ್ತರಿಗೆ ಉಣ ಬಡಿಸಲಾಯಿತು. ಅನ್ನಪೂರ್ಣೆಯ ಸಾಕ್ಷಾಾತ್ಕಾರವಾದ ಈ ಕ್ಷೇತ್ರದಲ್ಲಿ ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವಿತರಿಸಲು ಸಾಧ್ಯವಾಗುತ್ತಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದರು.

ಬಡಿಸಿ ಉಣಿಸುವ ವ್ಯವಸ್ಥೆ

‘ಅನ್ನಸ್ಯ ಕ್ಷುದಿತಂ ಪಾತ್ರಂ’ ಅನ್ನದಾನದಿಂದ ಮಾತ್ರ ಭಗವಂತನು ಮತ್ತು ಭಗವದ್ಭಕ್ತರನ್ನು ಪ್ರಸನ್ನೀಕರಿಸಬಹುದು. ಅಂತಹ ಪವಿತ್ರವೂ ಮಹತ್ವವುಳ್ಳ ಅನ್ನದಾನದ ಬಗ್ಗೆ ಕ್ಷೇತ್ರ ರಚನೆಯಾದ ಅಂದಿನಿಂದಲೂ ಅತ್ಯಂತ ಶ್ರದ್ಧೆಯಿಂದ ಕ್ಷೇತ್ರಕ್ಕೆ ಬಂದ ಭಕ್ತರಿಗೆ ಅನ್ನಪ್ರಸಾದ ವಿತರಣೆಯಲ್ಲಿ ಚ್ಯುತಿಯಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಬಫೆ ಪದ್ಧತಿಗೆ ಇಂದಿಗೂ ಅವಕಾಶ ನೀಡದೆ, ಬಡಿಸಿ ಉಣಿಸುವ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಖುದ್ದಾಗಿ ಮುತುವರ್ಜಿ ವಹಿಸಲಾಗುತ್ತಿದೆ ಎಂದು ಧರ್ಮದರ್ಶಿ ರಮಾನಂದ ಗುರೂಜಿ ತಿಳಿಸಿದ್ದಾರೆ.

ವಿಜಯದಶಮಿಯಂದು ಗುಜರಾತಿನ ಮಹಿಳೆಯರಿಂದ ದಾಂಡಿಯಾ ನೃತ್ಯ ಜರುಗಿತು.