ಭಾರತೀಯ ಸೈನ್ಯದ ಬಗ್ಗೆ ಕೇಳುವಾಗ ರೊಮಾಂಚನ, ಕೌತುಕಗಳು ಮೂಡುತ್ತದೆ. ಕಾಶ್ಮೀರ ಕಣಿವೆಯಲ್ಲಿ ಪ್ರತಿದಾಳಿ ನಡೆಸಲು ಸಜ್ಜಾಗುವ ಭಾರತೀಯ ಪಡೆಯ ಬಗ್ಗೆ ಕೇಳುವಾಗಲೆ ಮೈ ಜುಮ್ಮೆನ್ನುತ್ತದೆ ಅಲ್ವಾ?
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಯೋಧರೊಬ್ಬರ ಸಾಹಸ ಯಶೋಗಾಥೆ ಗೆ ಇಂದಿನ ಈ ಕಾರ್ಗಿಲ್ ವಿಜಯ್ ದಿನ ಸಾಕ್ಷಿಯಾಗಿದೆ. ಅವರ ಹೆಸರು ರವೀಂದ್ರ ಕಾಮತ್. ಎಸ್ ಅನಂತ ಕಾಮತ್ ಮತ್ತು ಶ್ರೀಮತಿ ಪದ್ಮಾವತಿ ಕಾಮತ್ ಅವರ ಮಗನಾಗಿ ಜನಿಸಿದ ರವೀಂದ್ರ ಕಾಮತ್ ಶಿಕ್ಷಣ ಮುಗಿಸಿದ ಬಳಿಕ 1996 ರಲ್ಲಿ ಭಾರತೀಯ ಭೂ ಸೇನೆಗೆ ಸೇರಿದ್ದರು. ಅವರಿಗೆ ಮೊದಲ ಪೋಸ್ಟಿಂಗ್ ಆಗಿದ್ದು ಅರುಣಾಚಲ ತವಾಂಗ್ ಪ್ರದೇಶದಲ್ಲಿ ,ನಂತರ ಕೊಯಮುತ್ತೂರುನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು, ಅದರಲ್ಲೂ ಪಾಕಿಸ್ತಾನದ ಕುಚೇಷ್ಟೆಯಿಂದಾಗಿ ಕಾರ್ಗಿಲ್ ಟೈಗರ್ ಹಿಲ್ ಪ್ರದೇಶ ಆಕ್ರಮಿಸಿಕೊಂಡಾಗ ,ಸೇನೆಯ ಮುಖ್ಯಸ್ಥರ ಸೂಚನೆ ಮೇರೆಗೆ ರಾಜಸ್ತಾನದ ಪಲೊದಿ ಎಂಬಲ್ಲಿ ಸೇವೆ ಸಲ್ಲಿಸಬೇಕಾಯಿತು,
ಅದು ಪಾಕಿಸ್ತಾನದ ಬಾರ್ಡರ್ ಸಮೀಪವೇ ಆಗಿತ್ತು. ಕಾಶ್ಮೀರ ಕಣಿವೆಯಲ್ಲಿ ಕಾರ್ಗಿಲ್ ಯುದ್ಧ ಕರಿನೆರಳು ಆವರಿಸಿದ್ದಾಗ ಹೆಗಲು ಕೊಟ್ಟು ಯುದ್ದಕ್ಕೆ ಶ್ರಮಿಸಿದ ಭಯಾನಕ ಚಿತ್ರಣವನ್ನು ಬಿಚ್ಚಿಡುತ್ತಾರೆ ರವೀಂದ್ರ ಕಾಮತ್.
ರೋಮಾಂಚಕ ದಿನಗಳು:
ಯುದ್ಧಭೂಮಿ ಎಂದರೆ ಸಾವುನೋವುಗಳು ಕಾಮನ್ ಎಂಬಂತೆ ಭಾಸವಾಗಿತ್ತು. ಇದೇ ಸಂದರ್ಭದಲ್ಲಿ ಕಾಶ್ಮೀರ ಕಣಿವೆಯ ನೌಷೆರ ಸೆಕ್ಟರ್ ನಲ್ಲಿ ಹಾಗೂ ರಾಜೌರಿ ಸತ್ವಾರಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕಾಗಿ ಬಂದಿತ್ತು, ಅಲ್ಲಿ ಇಲ್ಲಿ ಎಂಬಂತೆ ಉಗ್ರವಾದಿಗಳ ಅಡಗುದಾಣಗಳನ್ನು ಹುಟ್ಟಡಗಿಸುವ ಸವಾಲು ಕೂಡ ಇವರ ತಂಡದ ಹೆಗಲಮೇರೇರಿತ್ತು. ಆಪರೇಷನ್ ಟೆರರ್ ನಂತಹ ಅನೇಕ ಕಾರ್ಯಗಳನ್ನು ನಿರ್ವಹಿಸಿ ಸೈ ಎನಿಸಿದ್ದರು.
ಹೈದರಾಬಾದ್ ನ ಆರ್ಟಿಲರಿ ಸೆಂಟರ್ ನ ವಿಧ್ಯಾರ್ಥಿಗಳಿಗೆ ಟ್ರೈನರ್ ಆಗಿ, ಸಿಕ್ಕಿಂನ ಗ್ಯಾಂಗ್ಕ್ಟಾಕ್ ,ರಾಜಸ್ಥಾನ ದ ಜೋಧಪುರಗಳಲ್ಲಿ ನಾರ್ತ್ ಗ್ಲೇಷಿಯಾರ್ ಹಿಮಾಲಯ k2 ಬೆಟ್ಟದ ಸಮೀಪ ಸೇವೆ ಸಲ್ಲಿಸಬೇಕಾಗಿ ಬಂದಿತ್ತು, ಅದರಲ್ಲೂ ಅವರ ಪಾಲಿಗೆ ಸವಾಲಿಗೆ ಕಾರಣವಾಗಿದ್ದು ಪ್ರಪಂಚದ ಅತಿ ಎತ್ತರದ ಯುದ್ದಭೂಮಿ ಲೇಹ್ ಲಡಾಖ್ ಪ್ರಾಂತ್ಯದಲ್ಲಿ, ಅತೀ ಎತ್ತರದ ಹಿಮ ಪರ್ವತಚ್ಛಾದಿತ ಪ್ರದೇಶ.
ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಪ್ರದೇಶದಲ್ಲಿ ಅವರಿಗೆ ಸೇವೆಸಲ್ಲಿಸಬೆಕಾಗಿ ಬಂದಿತು. ಅಲ್ಲಿ ಇಲ್ಲಿ ಮೈ ಮೇಲೆ ಬೀಳುವ ಹಿಮ, ಕೊರೆಯುವಷ್ಟು ಮೈನಡುಕವಾಗುವ ,ಭೀಕರ ಹಿಮಪಾತಗಳು, ಅದೆಷ್ಟೋ ಕರಾಳತೆಯನ್ನು ಅನುಭವಿಸುವ ಸೈನಿಕರಲ್ಲಿ ಇವರು ಒಬ್ಬರಾಗಿದ್ದರು. ಯುದ್ಧ ಭೂಮಿ ಒಂದೆಡೆ ,ಇನ್ನೊಂದೆಡೆ ಹಿಮದ ಭಯಾನಕ ಸ್ಥಿತಿಗಳು, ಊಹಿಸಲಾಗದಷ್ಟು ಅನುಭವಗಳು ಸಿಕ್ಕಿದೆ ಎನ್ನುತ್ತಾರೆ ರವೀಂದ್ರ ಕಾಮತ್,
2020ರ ಭಾರತ- ಚೀನಾ ಗಡಿಭಾಗದ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಚೀನೀ ಸೈನಿಕರ ಆಕ್ರಮಣ ಯತ್ನವನ್ನು ಭಾರತೀಯ ಯೋಧರು ತಡೆದ ಸಂದರ್ಭದಲ್ಲಿಯೂ ಗಾಲ್ವಾನ್ ಕಣಿವೆಯ ಪಂಗ್ಗ್ವಾಂಗ್ ಲೇಕ್ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು ಅವರು.
ಈಗ ಪಂಜಾಬ್ ಭಟಿಂಡ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಒಂದು ಭಾರತೀಯ ಯೋಧನ ಕಥೆಯಾದರೆ ಲಕ್ಷಾಂತರ ಸೈನಿಕರ ಯಶೋಗಾಥೆಗಳು ಈ ಸಂದರ್ಭದಲ್ಲಿ ನೆನಪು ತರಿಸುತ್ತವೆ. ಇಂದು ಕಾರ್ಗಿಲ್ ವಿಜಯ ದಿವಸ್. ಪಾಕಿಸ್ತಾನಿ ಪಡೆಗಳು ಅತಿಕ್ರಮಿಸಿಕೊಂಡ ಟೈಗರ್ ಹಿಲ್ ಪ್ರದೇಶ ಮರುವಶಪಡಿಸಿಕೊಳ್ಳುವಲ್ಲಿ ಭಾರತ ಫಲಶ್ರುತಿ ಕಂಡ ದಿನ. ನೂರಾರು ಯೋಧರ ಬಲಿದಾನದ ದಿನ,ಭಾರತೀಯ ವಿಜಯ ದಿವಸ.
»ರಾಂ ಅಜೆಕಾರು