ಇದು El Nino ಪರಿಣಾಮ ಏಷ್ಯಾದಲ್ಲಿ ಮಳೆಯಬ್ಬರ ಯುರೋಪ್ ​-ಅಮೆರಿಕದಲ್ಲಿ ವಿಪರೀತ ತಾಪಮಾನ

ಜಾಗತಿಕವಾಗಿ ಹವಾಮಾನ ವೈಪರೀತ್ಯಗಳು ಕಂಡು ಬರುತ್ತಿವೆ. ಅಮೆರಿಕ ಮತ್ತು ಯುರೋಪ್​ನಲ್ಲಿ ಶಾಖದ ಅಲೆ ಹೆಚ್ಚುತ್ತಿವೆ.ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಮಳೆ ಅಬ್ಬರ ತೀವ್ರವಾಗಿದೆ. ಆದರೆ ಇನ್ನೊಂದೆಡೆ, ಯುರೋಪ್​, ಅಮೆರಿಕದಂತಹ ಪಾಶ್ಚಿಮಾತ್ಯ ದೇಶದಲ್ಲಿ ಜನರು ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಜನರು ಪ್ರವಾಹದಿಂದ ತತ್ತರಿಸುತ್ತಿದ್ದಾರೆ.

ಈ ತಾಪಮಾನ ಜುಲೈ 19 ಮತ್ತು 23ರಂದು ಮತ್ತಷ್ಟು ಹೆಚ್ಚಲಿದೆ. ಇಟಲಿ ಮಾತ್ರವಲ್ಲ ಗ್ರೀಸ್​, ಟರ್ಕಿ, ಬ್ಲಲ್ಕಾನ್ಸ್​​ ಜನರು ನೆತ್ತಿ ಸುಡುವ ಬಿಲಿಸಿನಿಂದ ಬಳಲುತ್ತಿದ್ದಾರೆ. ಮುಂದಿನ ವಾರಗಳಲ್ಲಿ ಅನೇಕ ಸ್ಥಳೀಯ ಪ್ರದೇಶಗಳಲ್ಲಿ ಶಾಖದ ಪ್ರಮಾಣ ಏರಿಕೆಯಾಗಲಿದೆ ಎಂದು ಇಟಲಿಯನ್​ ಹವಾಮಾನ ಮತ್ತು ಪರಿಸರ ತಜ್ಞರು ಎಚ್ಚರಿಸಿದ್ದಾರೆ.ಮಾಧ್ಯಮ ವರದಿಗಳ ಪ್ರಕಾರ, ಸ್ಪೇನ್​, ಇಟಲಿ ಮತ್ತು ಗ್ರೀಸ್​ ದೇಶಗಳಲ್ಲಿ ಕೆಲವು ದಿನಗಳಿಂದ ಜನರು ಅತಿಯಾದ ಉಷ್ಣಾಂಶದಿಂದ ಹೈರಾಣಾಗಿದ್ದಾರೆ. ರೋಮ್​, ಬೊಲೊಗ್ನಾ, ಫ್ಲೋರೆನ್ಸ್​​ ಸೇರಿದಂತೆ 16 ನಗರದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಇಟಲಿ​ ಆರೋಗ್ಯ ಸಚಿವರು ಕಳೆದ ವಾರ ರೆಡ್​ ಅಲರ್ಟ್​ ಘೋಷಣೆ ಮಾಡಿದ್ದಾರೆ. ಬಿರು ಬಿಸಿಲಿನ ಶಾಖ ಮುಂದಿನ ವಾರವೂ ಮುಂದುವರೆಯಲಿದ್ದು, ಸರ್ಡಿನಿಯಾದಲ್ಲಿ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಇಟಲಿ ಮಾಧ್ಯಮ ತಿಳಿಸಿದೆ.
ಎಲ್​ ನಿನೊ ಪರಿಣಾಮ ಎಂದರೇನು?: ಎಲ್ ನಿನೊ ವಿದ್ಯಮಾನ ಪ್ರತಿ ಎರಡರಿಂದ ಏಳು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಸಾಮಾನ್ಯವಾಗಿ ಒಂಬತ್ತರಿಂದ 12 ತಿಂಗಳುಗಳವರೆಗೆ ಈ ರೀತಿಯ ವಾತಾವರಣ ಇರುತ್ತದೆ. ಇದು ಮಧ್ಯ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನದ ಉಷ್ಣತೆಗೆ ಸಂಬಂಧಿಸಿದ ನೈಸರ್ಗಿಕವಾಗಿ ಸಂಭವಿಸುವ ಹವಾಮಾನ ಮಾದರಿ ಎನ್ನುತ್ತಾರೆ. ಎಲ್​ ನಿನೊದಿಂದಾಗಿ ಸಮುದ್ರ ಮೇಲ್ಮೈ ತಾಪಮಾನವು ಸರಾಸರಿಗಿಂತ ಬೆಚ್ಚಗಿರುತ್ತದೆ. ಇವು ಭೂ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನದ ಮುನ್ಸೂಚನೆ ನೀಡುತ್ತದೆ. ಇದರಿಂದ ಉತ್ತರ ಮತ್ತು ದಕ್ಷಿಣ ಗೋಳಾರ್ಧದ ಎಲ್ಲ ಭೂಪ್ರದೇಶಗಳಲ್ಲಿ ಧನಾತ್ಮಕ ತಾಪಮಾನ ವೈಪರೀತ್ಯಗಳನ್ನು ನಿರೀಕ್ಷಿಸಲಾಗುತ್ತದೆ.ಉತ್ತರ ಭಾರತದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಮಳೆ-ಪ್ರವಾಹದಿಂದ 90 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕೊರಿಯಾದಲ್ಲೂ ಕೂಡ ಬಿರುಗಾಳಿಸಹಿತ ಮಳೆ ಸುರಿಯುತ್ತಿದ್ದು ಪಿಲಿಪ್ಪೀನ್ಸ್‌ ಅಧಿಕಾರಿಗಳು ಟ್ರೋಪಿಕಲ್​ ಸೈಕ್ಲೋನ್​​ ಎಚ್ಚರಿಕೆ ನೀಡಿದ್ದಾರೆ

.ಜುಲೈ ತಿಂಗಳ ಆರಂಭದಿಂದ ಭೂಮಿ ಅತಿ ಉಷ್ಣಾಂಶಕ್ಕೆ ಒಳಗಾಗಿದ್ದು, ಜಾಗತಿಕ ತಾಪಮಾನ ಏರಿಕೆ ಕಂಡಿದೆ. ಜೂನ್​ನಲ್ಲಿ ಕೂಡ ಅಧಿಕ ಶಾಖದ ಅಲೆ ದಾಖಲಾಗಿದೆ. ವಿಶ್ವ ಹವಾಮಾನ ಕೇಂದ್ರದನುಸಾರ, ಇದು ಹವಾಮಾನ ಬದಲಾವಣೆ ಮತ್ತು ಎಲ್ ನಿನೊ ಹವಾಮಾನ ಮಾದರಿಯ ಆರಂಭಿಕ ಹಂತಗಳ ಮುನ್ಸೂಚನೆ. ವಿಶ್ವಸಂಸ್ಥೆ ಹೇಳುವಂತೆ ಶೇ 90ರಷ್ಟು ಎಲ್​ ನಿನೊ ಘಟನೆಗಳು 2023ರ ದ್ವಿತೀಯಾರ್ಧದಲ್ಲೂ ಮುಂದುವರೆಯಲಿದೆ.
ಏಷ್ಯಾ ಖಂಡದಲ್ಲಿ ಮಳೆ ಅಬ್ಬರ: ದಕ್ಷಿಣ ಏಷ್ಯಾದಲ್ಲಿ ಮಾನ್ಸೂನ್​ ಮಳೆ ತೀವ್ರತೆ ಹೆಚ್ಚಿದೆ. ಏಷ್ಯಾದೆಲ್ಲೆಡೆ ಭಾರಿ ಮಳೆಯಿಂದಾಗಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕಳೆದ ಎರಡು ವಾರದಲ್ಲಿ ಜೋರು ಮಳೆಯಿಂದಾಗಿ ಪ್ರವಾಹ ಮತ್ತು ಭೂ ಕುಸಿತಗಳು ಸಂಭವಿಸಿವೆ. ಭಾರತ, ಚೀನಾ ಮತ್ತು ಜಪಾನ್ ದೇಶಗಳ ಜನರು​ ಅಧಿಕ ಮಳೆಯಿಂದಾಗಿ ತತ್ತರಿಸುತ್ತಿದ್ದಾರೆ.