ಪೆಟ್ರೋಲ್, ಡೀಸೆಲ್ ಜಿಎಸ್ ಟಿ ವ್ಯಾಪ್ತಿಗೆ ತರಲು ಇದು ಸೂಕ್ತ ಸಮಯವಲ್ಲ: ನಿರ್ಮಲಾ ಸೀತಾರಾಮನ್

ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲು ಇದು ಸೂಕ್ತ ಸಮಯವಲ್ಲ ಎಂದು ಜಿಎಸ್‌ಟಿ ಮಂಡಳಿ ಅಭಿಪ್ರಾಯಪಟ್ಟಿದೆ.

ಪೆಟ್ರೋಲ್ ಹಾಗೂ ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಇವುಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆ ತಗ್ಗುತ್ತದೆ. ಪರಿಣಾಮವಾಗಿ ಇವುಗಳ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ಗಣನೀಯವಾಗಿ ಇಳಿಕೆ ಆಗುತ್ತದೆ. ಆದರೆ, ಹೀಗೆ ಮಾಡುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವರಮಾನಕ್ಕೆ ಪೆಟ್ಟು ಬೀಳುತ್ತದೆ ಎಂದು ಹೇಳಿದೆ.

ಪೆಟ್ರೋಲ್ ಹಾಗೂ ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ವಿಚಾರ ಸಂಬಂಧಿಸಿ ಕೇರಳ ಹೈಕೋರ್ಟ್‌ ಸೂಚನೆ ನೀಡಿತ್ತು. ಈ ಕಾರಣಕ್ಕಾಗಿ
ಲಖನೌನಲ್ಲಿ ನಡೆದ ಜಿಎಸ್ ಟಿ ಮಂಡಳಿಯ ಸಭೆ ಈ ವಿಷಯ ಪ್ರಸ್ತಾಪ ಆಗಿತ್ತು. ಆದರೆ, ಇವುಗಳನ್ನು ಈ ವ್ಯವಸ್ಥೆಯ ಅಡಿಯಲ್ಲಿ ತರಲು ಕಾಲ ಪಕ್ವವಾಗಿಲ್ಲ ಎಂಬ ಅನಿಸಿಕೆಯು ಮಂಡಳಿಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.