ನವದೆಹಲಿ: ಜಂತರ್ ಮಂತರ್‌ನಲ್ಲಿ 37 ದಿನಗಳ ಕಾಲ ನಡೆದ ಪ್ರತಿಭಟನೆಯನ್ನು ಅಂತ್ಯಗೊಳಿಸಿದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ವಿಡಿಯೋ ಸಂದೇಶದ ಮೂಲಕ ಬೆಂಬಲಿಗರು ಹಾಗೂ ಟೀಕಾಕಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ, ಪಕ್ಷದ ಹೋರಾಟ ಇನ್ನಷ್ಟೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮುನ್ನಡೆಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಹಾಗೂ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆ ಸೇರಿದಂತೆ ಹಲವು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ CJP ತನ್ನ 37 ದಿನಗಳ ಪ್ರತಿಭಟನೆಯನ್ನು ಹಿಂಪಡೆದುಕೊಂಡಿದೆ.
ಈ ಕುರಿತು ಮಾತನಾಡಿದ ದೀಪ್ಕೆ, “37 ದಿನಗಳ ಬಳಿಕ ಯಾವುದೇ ಆತಂಕವಿಲ್ಲದೆ ಮನೆಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡಿದ್ದೇನೆ. ಕಳೆದ ಕೆಲವು ವಾರಗಳು ನಮ್ಮ ತಂಡಕ್ಕೆ ಅತ್ಯಂತ ಸವಾಲಿನ ದಿನಗಳಾಗಿದ್ದವು,” ಎಂದು ಹೇಳಿದರು.
ದೇಶದ ವಿವಿಧ ಭಾಗಗಳಿಂದ ತಮ್ಮ ಚಳವಳಿಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, “ಎಲ್ಲರೂ ಅನುಮಾನ ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲೂ ನಮ್ಮ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ. ನಿಮ್ಮ ಸಹಕಾರವಿಲ್ಲದೆ ಈ ಹೋರಾಟ ಯಶಸ್ವಿಯಾಗುತ್ತಿರಲಿಲ್ಲ,” ಎಂದರು.
ಪ್ರತಿಭಟನೆ ಮುಗಿದ ಬಳಿಕ ಜಂತರ್ ಮಂತರ್‌ನಲ್ಲಿ ಉಳಿದಿದ್ದ ಬೆಂಬಲಿಗರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದ ದೀಪ್ಕೆ, ತಮಗೆ ಟೈಫಾಯ್ಡ್ ಕಾಣಿಸಿಕೊಂಡಿದ್ದು, 101 ಡಿಗ್ರಿವರೆಗೆ ಜ್ವರ ಏರಿದ್ದ ಕಾರಣ ಮನೆಗೆ ಮರಳಬೇಕಾಯಿತು ಎಂದು ತಿಳಿಸಿದರು.
ಟೀಕಾಕಾರರಿಗೂ ಧನ್ಯವಾದ ಸಲ್ಲಿಸಿದ ಅವರು, “ನಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳದವರು, ನಮ್ಮ ಪ್ರತಿಭಟನೆಯನ್ನು ಪ್ರಶ್ನಿಸಿದವರು ಮತ್ತು ಟೀಕಿಸಿದವರಿಂದಲೇ ನಾವು ಇನ್ನಷ್ಟು ಉತ್ತಮವಾಗಲು ಸಾಧ್ಯವಾಯಿತು. ಅವರ ಪ್ರಶ್ನೆಗಳು ಹಾಗೂ ಟೀಕೆಗಳು ನಮ್ಮನ್ನು ಸುಧಾರಿಸಿಕೊಳ್ಳಲು ನೆರವಾದವು. ಅದಕ್ಕಾಗಿಯೇ ನಮ್ಮ ಭರವಸೆಗಳನ್ನು ಈಡೇರಿಸಲು ಸಾಧ್ಯವಾಯಿತು,” ಎಂದು ಹೇಳಿದರು.
“ಮೊದಲ ದಿನದಿಂದಲೇ ನಾನು ಹೇಳುತ್ತಿದ್ದೇನೆ, ಇದು ಕೇವಲ ಆರಂಭ ಮಾತ್ರ. ಕಾಕ್ರೋಚ್ ಜನತಾ ಪಾರ್ಟಿಗೆ ಇನ್ನೂ ಬಹಳ ದೂರದ ಪಯಣ ಬಾಕಿಯಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮುನ್ನಡೆಯುತ್ತೇವೆ,” ಎಂದು ಅಭಿಜೀತ್ ದೀಪ್ಕೆ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.















