ನವದೆಹಲಿ: ಕಳೆದ ಕೆಲವು ವರ್ಷಗಳಿಂದ ತಮ್ಮ ಸರ್ಕಾರವು ಹಜ್ ನೀತಿಯಲ್ಲಿ ಮಾಡಿದ ಬದಲಾವಣೆಗಳಿಂದ ಹೆಚ್ಚು ಹೆಚ್ಚು ಜನರು ವಾರ್ಷಿಕ ಯಾತ್ರೆಗೆ ಹೋಗಲು ಅವಕಾಶವನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ವರ್ಷ ನಾಲ್ಕು ಸಾವಿರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು ಮೆಹ್ರಮ್ (ಪುರುಷರ ನೆರವಿಲ್ಲದೆ) ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ಅತಿ ದೊಡ್ಡ ಪರಿವರ್ತನೆಯಾಗಿದೆ.
ಪ್ರಧಾನಿ ಮೋದಿ ಇಂದು ದೇಶವನ್ನುದ್ದೇಶಿಸಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ 103ನೇ ಮಾಸಿಕ ರೇಡಿಯೋ ಭಾಷಣವನ್ನು ಮಾಡಿದರು
ಇಂದು ರೆಡಿಯೋದಲ್ಲಿ ಪ್ರಸಾರವಾದ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ, ಪುರುಷರ ನೆರವಿಲ್ಲದೆ (ಮೆಹ್ರಮ್) ಈ ವರ್ಷ ಹಜ್ ಯಾತ್ರೆ ಕೈಗೊಂಡ ಮುಸ್ಲಿಂ ಮಹಿಳೆಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಸ್ಲಿಂ ಮಹಿಳೆಯರ ಈ ಪ್ರಯಾಣವು ಹಲವು ವಿಧಗಳಲ್ಲಿ ಬಹಳ ವಿಶೇಷವಾಗಿದೆ. ಯಾವುದೇ ಪುರುಷ ಸಹಚರ ಅಥವಾ ಮೆಹ್ರಮ್ ಇಲ್ಲದೆ ಹಜ್ ಯಾತ್ರೆ ಮಾಡಿದ ಮಹಿಳೆಯರು ಮತ್ತು ಸಂಖ್ಯೆ 50 ಅಥವಾ 100 ಅಲ್ಲ. ಅದು 4,000ಕ್ಕಿಂತ ಹೆಚ್ಚು. ಇದೊಂದು ದೊಡ್ಡ ಪರಿವರ್ತನೆಯಾಗಿದೆ ಎಂದು ಬಣ್ಣಿಸಿದರು.
ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಈ ಬಗ್ಗೆ ನನಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದಾರೆ. ಈಗ ಹೆಚ್ಚು ಹೆಚ್ಚು ಜನರು ಹಜ್‌ಗೆ ಹೋಗುವ ಅವಕಾಶವನ್ನು ಪಡೆಯುತ್ತಿದ್ದಾರೆ. ಹಜ್ ಯಾತ್ರೆಯಿಂದ ಹಿಂದಿರುಗಿದ ಜನರು, ವಿಶೇಷವಾಗಿ ನಮ್ಮ ತಾಯಂದಿರು ಮತ್ತು ಸಹೋದರಿಯರು ತಮ್ಮ ಪತ್ರಗಳ ಮೂಲಕ ನೀಡಿದ ಆಶೀರ್ವಾದವು ತುಂಬಾ ಸ್ಫೂರ್ತಿದಾಯಕವಾಗಿದೆ ಎಂದು ಮೋದಿ ಹೇಳಿದರು.ಈ ಹಿಂದೆ ಮುಸ್ಲಿಂ ಮಹಿಳೆಯರಿಗೆ ಮೆಹ್ರಮ್ ಇಲ್ಲದೆ ಹಜ್ ಮಾಡಲು ಅವಕಾಶವಿರಲಿಲ್ಲ ಎಂದು ಪ್ರಧಾನಿ ಮೋದಿ, ಮನ್ ಕಿ ಬಾತ್ ಮೂಲಕ ನಾನು ಸೌದಿ ಅರೇಬಿಯಾ ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಅಲ್ಲದೇ, ಮೆಹ್ರಮ್ ಇಲ್ಲದೆ ಹಜ್‌ಗೆ ತೆರಳುವ ಮಹಿಳೆಯರಿಗೆ ವಿಶೇಷವಾಗಿ ಮಹಿಳಾ ಸಂಯೋಜಕರನ್ನು ನೇಮಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಹಜ್ ನೀತಿಯಲ್ಲಿ ಮಾಡಲಾದ ಬದಲಾವಣೆಗಳು ಹೆಚ್ಚು ಮೆಚ್ಚುಗೆಯನ್ನೂ ಗಳಿಸಿವೆ ಎಂದು ತಿಳಿಸಿದರು.
10 ಲಕ್ಷ ಕೆಜಿ ಮಾದಕ ವಸ್ತು ನಾಶ: ದೇಶದಲ್ಲಿ 12,000 ಕೋಟಿ ಮೌಲ್ಯದ 10 ಲಕ್ಷ ಕೆ.ಜಿ ಮಾದಕ ವಸ್ತುಗಳನ್ನು ನಾಶ ಪಡಿಸಲಾಗಿದೆ ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್ನಲ್ಲಿ ತಿಳಿಸಿದರು. ಇದು ಭಾರತದ ಮಟ್ಟಿಗೆ ಹೊಸ ದಾಖಲೆಯಾಗಿದೆ. ಜೊತೆಗೆ ದುರ್ಬಲ ವರ್ಗಗಳನ್ನು ಅಪಾಯದಿಂದ ರಕ್ಷಿಸುವ ಒಂದು ಹೆಜ್ಜೆಯಾಗಿದೆ ಎಂದರು.ಜಲ ಸಂರಕ್ಷಣೆ ಪ್ರಯತ್ನ: ದೇಶದ ಆಜಾದಿ ಕಾ ಅಮೃತ್ ಮಹೋತ್ಸವದ ಈ ಸಂದರ್ಭದಲ್ಲಿ ಸುಮಾರು 60,000 ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ಇದು ಜಲ ಸಂರಕ್ಷಣೆಯ ಪ್ರಯತ್ನಕ್ಕೆ ಉದಾಹರಣೆಯಾಗಿ ಹೊರಹೊಮ್ಮಿದೆ. ದೇಶಾದ್ಯಂತ ಇನ್ನೂ 50,000 ಸರೋವರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಎಂದು ಪ್ರಧಾನಿ ಹೇಳಿದರು. ಅಲ್ಲದೇ, ಉತ್ತರ ಪ್ರದೇಶದಲ್ಲಿ ಒಂದು ದಿನದಲ್ಲಿ 30 ಕೋಟಿ ಸಸಿಗಳನ್ನು ನೆಡುತ್ತಿರುವುದನ್ನು ಅವರು ಉಲ್ಲೇಖಿಸಿದರು.












