“ಧರ್ಮಸ್ಥಳ ಪ್ರಕರಣದಲ್ಲಿ ಸುಮ್ಮನೆ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ, ಹೆಣ್ಣು ಮಕ್ಕಳ ಸಾವುಗಳು ಹೇಗೆ ಸಂಭವಿಸಿದವು ಎಂದು ಪ್ರಶ್ನೆ ಮಾಡುವುದು ತಪ್ಪೇ”:ಪ್ರಕಾಶ್ ರಾಜ್

ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರ ಪ್ರಕರಣದಲ್ಲಿ ತಮ್ಮ ಹೆಸರನ್ನು ಉದ್ದೇಶಪೂರ್ವಕವಾಗಿ ತಳುಕು ಹಾಕಲಾಗುತ್ತಿದೆ ಎಂದು ನಟ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಪ್ರಮುಖ ವ್ಯಕ್ತಿ ಎಂದು ಹೇಳಲಾಗುತ್ತಿರುವ ಚಿನ್ನಯ್ಯನೊಂದಿಗೆ ತಮ್ಮ ಯಾವುದೇ ನೇರ ಸಂಪರ್ಕ ಇಲ್ಲ ಎಂದು ಸ್ಪಷ್ಟಪಡಿಸಿದರು.

“ಚಿನ್ನಯ್ಯನಿಗೆ ನೀನು ನನ್ನ ಮುಂದೆ ಹೇಳಿದ ಸತ್ಯವನ್ನು ಎಸ್‌ಐಟಿ ಮುಂದೆ ಹೋಗಿ ಹೇಳು. ಸತ್ಯ ಹೇಳಿದರೆ ಊರೇ ಕೊಂಡಾಡುತ್ತದೆ, ನಾನು ನಿನ್ನನ್ನು ತಬ್ಬಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಆದರೆ ನಾನು ಚಿನ್ನಯ್ಯ ಅಥವಾ ಗಿರೀಶ್ ಮಟ್ಟಣ್ಣನವರ್ ಅವರನ್ನು ಇದುವರೆಗೆ ಖುದ್ದಾಗಿ ಭೇಟಿಯಾಗಿಲ್ಲ” ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಗೆ ಸಂಬಂಧಿಸಿದ ಆಹ್ವಾನ ಪತ್ರಿಕೆಯಲ್ಲಿ ‘ಮಾರಿಕೊಂಡ ಮಾಧ್ಯಮಗಳು’ ಎಂಬ ಪದ ಬಳಕೆಯ ವಿವಾದದ ಕುರಿತು ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ಸಾಮಾಜಿಕ ಜಾಲತಾಣದಲ್ಲಿ ನಾನು ಆ ಪದ ಬಳಸಿದ್ದೇನೆ. ಆದರೆ ಪ್ರೆಸ್ ಕ್ಲಬ್‌ಗೆ ಕಳುಹಿಸಿದ ಅಧಿಕೃತ ಆಹ್ವಾನದಲ್ಲಿ ಆ ಪದ ಬಳಸಿಲ್ಲ. ಅಲ್ಲಿ ಮಾಧ್ಯಮದವರನ್ನು ನಮ್ಮ ಬಂಧುಗಳು ಮತ್ತು ಆತ್ಮೀಯರು ಎಂದೇ ಸಂಬೋಧಿಸಿದ್ದೇನೆ” ಎಂದರು.

“ಪತ್ರಿಕೋದ್ಯಮದಲ್ಲಿ ನನಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರು ದೂರವಾಣಿ ಮೂಲಕ ಮಾತನಾಡಿ ಸತ್ಯವನ್ನು ಬರೆಯಲು ಆಗುತ್ತಿಲ್ಲ, ನಮ್ಮ ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಿ ಎಂದು ಹೇಳುತ್ತಾರೆ. ಅವರ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ” ಎಂದು ಹೇಳಿದರು.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ತೇಜೋವಧೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, “ಕೆಲವು ಮಾಧ್ಯಮಗಳು ಚಿನ್ನಯ್ಯ ನನ್ನ ಹೆಸರು ಹೇಳಿದ್ದಾನೆ ಎಂದು ವರದಿ ಮಾಡಿವೆ. 200 ಕೋಟಿ ರೂಪಾಯಿ ಹಗರಣ ಮತ್ತು ಹಣದ ವ್ಯವಹಾರ ನಡೆದಿದೆ ಎಂದು ಆತ ಹೇಳಿದ್ದಾನೆ ಎನ್ನಲಾಗುತ್ತಿದೆ. ಕೆಲವರು ಈ ಷಡ್ಯಂತ್ರದಲ್ಲಿ ಪ್ರಕಾಶ್ ರಾಜ್ ಕೈವಾಡವಿದೆ ಎಂದು ತೀರ್ಮಾನಿಸಿಬಿಟ್ಟಿದ್ದಾರೆ. ಆದರೆ ಈ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ” ಎಂದು ಸ್ಪಷ್ಟಪಡಿಸಿದರು.

“ಧರ್ಮಸ್ಥಳದಲ್ಲಿ ಮೃತಪಟ್ಟ ಹೆಣ್ಣು ಮಕ್ಕಳ ಮೇಲೆ ನಿಮಗೇಕೆ ಕನಿಕರ ಇಲ್ಲ? ಸೌಜನ್ಯ ಹೇಗೆ ಸಾವನ್ನಪ್ಪಿದಳು? ಅಲ್ಲಿನ ಇತರ ಹೆಣ್ಣು ಮಕ್ಕಳ ಸಾವುಗಳು ಹೇಗೆ ಸಂಭವಿಸಿದವು ಎಂಬ ಪ್ರಶ್ನೆ ಕೇಳುವುದು ತಪ್ಪೇ? ನಾನು ಆ ಸಾವುಗಳಿಗೆ ನ್ಯಾಯ ದೊರಕಬೇಕು ಎಂಬ ಕಾರಣಕ್ಕೆ ಪ್ರಶ್ನೆ ಮಾಡಿದ್ದೇ ಹೊರತು ಕ್ಷೇತ್ರದ ವಿರುದ್ಧ ಯಾವುದೇ ಷಡ್ಯಂತ್ರ ಮಾಡಿಲ್ಲ” ಎಂದು ಹೇಳಿದರು.

ಇದೇ ವೇಳೆ, “ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲು ಪ್ರಕಾಶ್ ರಾಜ್ 200 ಕೋಟಿ ರೂಪಾಯಿ ಡೀಲ್ ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಅಷ್ಟೊಂದು ಹಣವನ್ನು ನಾನೆಲ್ಲಿಂದ ತರಲಿ? ಪರಮ ಪವಿತ್ರ ಧರ್ಮಸ್ಥಳದ ವಿರುದ್ಧ ನಾನು ಯಾಕೆ ಅಪಪ್ರಚಾರ ಮಾಡಲಿ? ವಿಷಯವನ್ನು ತಿರುಚಿ ನನಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ನಾನು ಧರ್ಮ ವಿರೋಧಿ ಎಂದು ಬಣ್ಣ ಬಳಿಯುವುದು ಸರಿಯಲ್ಲ” ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.