ಕಾರ್ಕಳ: ಪರ್ಪಲೆ ಗಿರಿ ಶತಶತಮಾನಗಳ ಪುರಾತನ ಕಾಲದಲ್ಲಿ ವಿಸ್ತಾರವಾದ ವ್ಯಾಪ್ತಿ ಹೊಂದಿದ್ದು, ಹಲವಾರು ದೇವಸ್ಥಾನಗಳ ನೇರ ಸಂಬಂಧವನ್ನು ಹೊಂದಿರುವ ಬಗ್ಗೆ ಮೊದಲ ದಿನದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ತಿಳಿದುಬಂದಿದೆ.
ಪರ್ಪಲೆ ಗಿರಿಯಲ್ಲಿ ಪ್ರಧಾನವಾಗಿ ಕಾರ್ಣಿಕದೊಡೆಯ ಕಲ್ಕುಡ ದೈವವು ಶತಶತಮಾನಗಳ ತನ್ನ ಸನ್ನಿಧಾನ ಚೈತನ್ಯದ ಇರುವಿಕೆಯ ಬಗ್ಗೆ ಊರ ಜನತೆಯನ್ನು ವಿವಿಧ ರೀತಿಯಲ್ಲಿ ಬಡಿದೆಚ್ಚರಿಸುತ್ತಾ, ತನ್ನ ಪುನರುತ್ಥಾನದ ಸಮಯವನ್ನು ಸಹ ನಿಗದಿ ಮಾಡಿಕೊಂಡಿದೆ ಎಂಬ ವಿಚಾರವೂ ಸ್ಪಷ್ಟವಾಗಿದೆ.
ಹಾಗೆ ಪರ್ಪಲೆಗುಡ್ಡದ ತಪ್ಪಲಿನಲ್ಲಿ ಹಿಂದೆ ಪುರಾತನ ವಿಷ್ಣು ದೇಗುಲವಿತ್ತು. ಕಾಲಕ್ರಮೇಣ ಈ ದೇವಸ್ಥಾನ ಅವನತಿ ಹೊಂದಿರುವುದು ಕಂಡುಬಂದಿದೆ.
ಪರ್ಪಲೆಗಿರಿಯಲ್ಲಿ ದೈವಿಕ ಶಕ್ತಿ ಇದೆ. ಈ ಶಕ್ತಿಗಳ ಪುನರುತ್ಥಾನಕ್ಕೆ ಕಾಲ ಕೂಡಿಬಂದಿದೆ. ಮುಂದಿನ ಎರಡು ದಿನಗಳ ಕಾಲ ನಡೆಯುವ ಪ್ರಶ್ನಾ ಚಿಂತನೆಯಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಗುರುವಾರ ಹಿಂದೂ ಜಾಗರಣ ವೇದಿಕೆ ಕಾರ್ಕಳ ಹಾಗೂ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನದ ಅಂಗವಾಗಿ ಖ್ಯಾತ ದೈವಜ್ಞರಾದ ನಾರಾಯಣ ಪೊದುವಾಳ್ ಮತ್ತು ಹಿರಿಯ ಧಾರ್ಮಿಕ ಚಿಂತಕರಾದ ಹಿರಣ್ಯ ವೆಂಕಟೇಶ ಭಟ್ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಗೆ ಚಾಲನೆ ನೀಡಲಾಗಿತ್ತು.












