ಕಾರವಾರ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಏನೋ ಹೆಚ್ಚು ಕಮ್ಮಿ ಆಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಬೇಕು. ಆಗ ಸರಿಯಾಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
‘ಸಿದ್ದರಾಮಯ್ಯ ಸರ್ಕಾರ ಉಳಿದಿದ್ದೆ ಡ್ರಗ್ಸ್ ಮಾಫಿಯಾದಿಂದ’ ಎಂಬ ಕಟೀಲ್ ಅವರ ಹೇಳಿಕೆಗೆ ಶಿರಸಿಯಲ್ಲಿ ಶನಿವಾರ ಅವರು ತಿರುಗೇಟು ನೀಡಿದ್ದಾರೆ.
ಕಟೀಲ್ ತಮ್ಮ ಸ್ಥಾನದ ಗೌರವಕ್ಕೆ ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಯಲಿ. ಅವರಿಗೆ ರಾಜಕೀಯದ ಅಲ್ಪಸ್ವಲ್ಪ ಪರಿಜ್ಞಾನ ಇದೆ ಎಂದು ತಿಳ್ಕೊಂಡಿದ್ದೆ. ಈ ರೀತಿಯ ಮಾತುಗಳಿಂದ ಅವರ ಸ್ಥಾನಕ್ಕೇ ಕಳಂಕ ಬರುತ್ತದೆ ಎಂದು ಕುಟುಕಿದರು.
ಯಾರೋ ಸಣ್ಣಪುಟ್ಟ ನಟಿಯರನ್ನು ಜೈಲಿಗೆ ಹಾಕಿದ ಕೂಡಲೇ ಡ್ರಗ್ಸ್ ಮುಕ್ತ ಆಗಲ್ಲ. ನಾನೂ ಸರ್ಕಾರದಲ್ಲಿ ಇದ್ದವನೇ. ಅವರು ಎಫ್ಐಆರ್ ಹಾಕಲಿ ನೋಡೋಣ. ನಮ್ಮಲ್ಲಿ ಇದ್ದವರು ಬಹಳಷ್ಟು ಜನ ಅವರ ಸರ್ಕಾರದಲ್ಲೂ ಇದ್ದಾರಲ್ಲ. ಅವರ ಮೇಲೂ ದೂರು ದಾಖಲು ಮಾಡಲಿ ಎಂದು ಸವಾಲೆಸೆದರು.
ಕಾಂಗ್ರೆಸ್ನಲ್ಲಿ ಬದಲಾವಣೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲಸ ಮಾಡದವರನ್ನು ಬದಲಿಸಿ ಉತ್ಸಾಹಿಗಳಿಗೆ ಜವಾಬ್ದಾರಿ ನೀಡಲಾಗುತ್ತದೆ. ಮೊದಲು ನಮ್ಮ ಮನೆ ಸರಿ ಮಾಡ್ತಿದೇನೆ. ನಂತರ ಬೇರೆ ವಿಷಯ. ಹಾಗಾಗಿ ರಾಜ್ಯದ ಎಲ್ಲ ಕಡೆ ಹೋಗ್ತಿದೇನೆ ಎಂದು ತಿಳಿಸಿದರು.