ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಲಾಕ್‌ಡೌನ್ ಮಾಡುವ ಸಾಧ್ಯತೆ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಸರ್ಕಾರ ಮೂಲಗಳಿಂದ ನಿಖರ ಮಾಹಿತಿ ಸಿಕ್ಕಿದೆ.
ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಆಗಲಿದೆ ಎನ್ನುವ ಸುದ್ದಿ ಕೇಳಿಬಂದಿತ್ತು. ಅದರಂತೆ ಇಂದು ಸಂಜೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಸಭೆ ಕೂಡ ನಡೆಯಲಿದೆ . ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸದ್ಯಕ್ಕೆ ಲಾಕ್‌ಡೌನ್ ಇಲ್ಲ ಎಂದು ತಿಳಿದುಬಂದಿದೆ.
ಸಿಎಂ ನೇತೃತ್ವದ ನಡೆಯುವ ಸಭೆಯಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವುದರ ಜೊತೆಗೆ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಇಂದು ಹೊಸ ಮಾರ್ಗಸೂಚಿಯನ್ನ ಜಾರಿಗೆ ತರಲು ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ.
ಸೋಂಕು ಹರಡುವಿಕೆ ಶೇ.5 ರ ಪ್ರಮಾಣ ದಾಟಿದರೆ ಮಾತ್ರ ಲಾಕ್‌ಡೌನ್ ಎಂಬ ಕಠಿಣ ಕ್ರಮಕ್ಕೆ ನಿರ್ಧರಿಸೋಣ. ಇಲ್ಲವಾದ್ರೆ, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಬಳಿ ಚರ್ಚಿಸಿ, ಟಫ್‌ರೂಲ್ಸ್ ಮಾತ್ರ ಜಾರಿಗೆ ತರೋಣ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎನ್ನಲಾಗಿದೆ.