ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ಮದ್ರಾಸ್‌ ಐ ಸೋಂಕು ಹರಡುವಿಕೆ ಆತಂಕ

ವಿಜಯಪುರ/ ಧಾರವಾಡ :ಬಹುತೇಕರಲ್ಲಿ ಐ ಇನ್ಪೆಕ್ಷನ್ ಕಾಣಿಸಿಕೊಳ್ಳುತ್ತಿದ್ದು, ಜನರು ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್‌ ಸೆಂಟರ್‌ಗಳೇ ಹೆಚ್ಚಿರುವ ಇರುವ ವಿಜಯಪುರ ಮತ್ತು ಧಾರವಾಡ ನಗರಗಳಲ್ಲಿ ಮದ್ರಾಸ್‌ ಐ ಭಯ ಮತ್ತಷ್ಟು ಭೀತಿ ಮೂಡಿಸಿದೆ. ಕಾರಣ ವಿದ್ಯಾರ್ಥಿಗಳು ಒಟ್ಟಿಗೆ ಕಲಿಯುವ, ಹಾಸ್ಟೆಲ್​ಗಳಲ್ಲಿ ಇರುವುದರಿಂದ ಮದ್ರಾಸ್‌ ಐ ಕಾಣಿಸಿಕೊಂಡಿದೆ. ಮದ್ರಾಸ್‌ ಐ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ರೋಗಿಗಳ ಪೈಕಿ ಶೇ.30 ರಷ್ಟು ಕೋಚಿಂಗ್​ಗಾಗಿ ಬಂದ ವಿದ್ಯಾರ್ಥಿಗಳು, ಹಾಸ್ಟೆಲ್‌ಗಳಲ್ಲಿ ವಾಸವಿದ್ದಾರೆ. ರಾಜ್ಯದಲ್ಲಿ ಕೆಲವೆಡೆ ಕಾಣಿಸಿಕೊಂಡ ಮದ್ರಾಸ್‌ ಐ (ಕಣ್ಣಿನ ಬಾಧೆ) ಸೋಂಕು ಈಗ ವಿಜಯಪುರ ಹಾಗು ಧಾರವಾಡ ಜಿಲ್ಲೆಗಳಲ್ಲಿ ಹಬ್ಬುತ್ತಿದೆ.

Madras eye: ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ಆತಂಕ
ಮದ್ರಾಸ್‌ ಐ ಸಾಂಕ್ರಾಮಿಕ ಸೋಂಕು ಆಗಿರುವ ಕಾರಣ ಒಬ್ಬರಿಂದ ಒಬ್ಬರಿಗೆ ಹರಡುತ್ತಿದದ್ದು, ಎಲ್ಲಾ ವಯಸ್ಸಿನ ಜನರಲ್ಲಿ‌ ಕಂಡು ಬರುತ್ತಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಯಾವುದೇ ಕಾರಣಕ್ಕೂ ಮದ್ರಾಸ್‌ ಐ (ಕಣ್ಣಿನ ಬಾಧೆ) ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ

ಸೋಂಕಿದ್ದಲ್ಲಿ ಐಸೋಲೇಟ್ ಆಗಿ: ಮದ್ರಾಸ್‌ ಐ ಸೋಂಕಿಗೆ ಒಳಗಾದವರು ಐಸೋಲೇಶನ್‌ ಆಗಬೇಕು. ಇತರರಿಂದ ದೂರ ಉಳಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅಲ್ಲದೆ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮದ್ರಾಸ್‌ ಐ ಕಂಡು ಬಂದಲ್ಲಿ ಅಂತ ವಿದ್ಯಾರ್ಥಿಗಳಿಗೆ ವಿಶ್ರಾಂತಿ ಪಡೆಯಲು ಬಿಡಬೇಕು. ಶಿಕ್ಷಕರು ಸಹ ಮದ್ರಾಸ್‌ ಐ ಸೋಂಕಿಗೆ ಒಳಗಾದಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ ಎಂದಿದ್ದಾರೆ.

ಆರೋಗ್ಯ ಇಲಾಖೆ ಸೂಚನೆ : ಮೊದಲು ಕಣ್ಣಿ ಒಳಭಾಗದ ರೆಪ್ಪೆ, ಬಿಳಿ ಗುಡ್ಡೆ ಭಾಗದಲ್ಲಿ ಕಾಣಿಸಿ ಕೊಳ್ಳುವ ಇನ್ಪೆಕ್ಷನ್‌ ಬಳಿಕ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತೆ. ಇದರಿಂದ ಕಪ್ಪು ದೃಷ್ಟಿ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಎಚ್ಚರ ವಹಿಸಬೇಕು, ಸೂಕ್ತ ಸಮಯದಲ್ಲಿ ವೈದ್ಯರಿಂದ ಉಪಚಾರ ಪಡೆಯುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.ವೈದ್ಯರನ್ನು ಸಂಪರ್ಕಿಸಿ : ಮದ್ರಾಸ್ ಐ ಬಂದಿದೆ ಎಂಬುದು ಹೇಗೆ ಗೊತ್ತಾಗುತ್ತದೆ ಎಂದರೇ,ಕಣ್ಣು ಕೆಂಪಗಾಗೋದು, ಕಣ್ಣಲ್ಲಿ ಉರಿ ಕಾಣಿಸಿಕೊಳ್ಳುವುದು, ಕಣ್ಣಿಗೆ ಬಾವು ಬರೋದು, ಕಣ್ಣಿಂದ ತಂತಾನೆ ನೀರು ಸೋರುವುದು, ಇರಿಟೇಶನ್ ಉಂಟಾಗುತ್ತದೆ. ಮದ್ರಾಸ್‌ ಐ ಸೋಂಕು ಕಂಡು ಬಂದಲ್ಲಿ ತಕ್ಷಣವೇ ಸೋಂಕಿತರು ವೈದ್ಯರನ್ನು ಸಂಪರ್ಕಿಸಬೇಕು. ಈ ಸೋಂಕಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಧಾರವಾಡದಲ್ಲೂ ಮದ್ರಾಸ್ ಐ ಕೇಸ್ ಹೆಚ್ಚು : ಪ್ರತಿದಿನವೂ 60 ರಿಂದ 80 ಮದ್ರಾಸ್ ಐ ಕೇಸ್​ಗಳು ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದು, ಇದಕ್ಕಾಗಿ ಧಾರವಾಡ ಜಿಲ್ಲಾಸ್ಪತ್ರೆ ವೈದ್ಯರು ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕ ಕೊಠಡಿ ಸಿದ್ಧ ಮಾಡಿಕೊಂಡಿದ್ದಾರೆ. ಜಿಲ್ಲಾಸ್ಪತ್ರೆ ಮುಖ್ಯ ಕಟ್ಟಡದಲ್ಲಿ ಕಣ್ಣಿನ ಚಿಕಿತ್ಸಾ ವಿಭಾಗದಲ್ಲಿ, ಮದ್ರಾಸ್ ಐ ಪೀಡಿತರ ಚಿಕಿತ್ಸೆಗಾಗಿ ಪ್ರತ್ಯೇಕ ಸಿಬ್ಬಂದಿ ಹಾಗೂ ಕೊಠಡಿ ವ್ಯವಸ್ಥೆ ಮಾಡಿಕೊಂಡಿದೆ.

ಅಲ್ಲದೆ, ಮದ್ರಾಸ್ ಐ ಚಿಕಿತ್ಸೆಗೆ ಆಗಮಿಸುವರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವೈದ್ಯಕೀಯ ಸಿಬ್ಬಂದಿ, ವೈದ್ಯರನ್ನು ನೇಮಿಸಲಾಗಿದ್ದು, ರಜಾ ದಿನಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಉಳಿದಂತೆ ಎಲ್ಲ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 4:30ರ ವರೆಗೆ ಚಿಕಿತ್ಸೆ ಲಭ್ಯವಿರುತ್ತಾರೆ. ಚಿಕಿತ್ಸೆ ನಂತರ ಅಲ್ಲಿಯೇ ಅಗತ್ಯ ಔಷಧಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಇನ್ನು ಈ ಬಗ್ಗೆ ಮಾಹಿತಿ ನೀಡಿದ ಧಾರವಾಡ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಸಂಗಪ್ಪ ಗಾಬಿ ಅವರು, ಸರ್ಕಾರಿ ಆಸ್ಪತ್ರೆಗೆ ಮುಖ್ಯವಾಗಿ ಗ್ರಾಮೀಣ ಜನರು, ಆರ್ಥಿಕವಾಗಿ ಹಿಂದುಳಿದವರು, ಗರ್ಭಿಣಿ ಮಹಿಳೆಯರು, ಸಣ್ಣ ಮಕ್ಕಳು, ಇತರ ರೋಗಿಗಳು ಚಿಕಿತ್ಸೆಗಾಗಿ ದಿನ ನಿತ್ಯ ಆಗಮಿಸುತ್ತಾರೆ. ಅವರಿಗೆ ಮದ್ರಾಸ್ ಐ ಕಣ್ಣಿನ ಉರಿ ಊತವಾಗಿ ಸಮಸ್ಯೆ ಆಗಬಾರದು. ಅದಕ್ಕಾಗಿ ಮದ್ರಾಸ್ ಐ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಆಗಮಿಸುವವರಿಗೆ ಪ್ರತ್ಯೇಕವಾಗಿ ನೋಂದಣಿ ಕೌಂಟರ್, ದಾಖಲಾತಿ ಕೇಂದ್ರ ಹಾಗೂ ಚಿಕಿತ್ಸಾ ಕೊಠಡಿಯನ್ನು ಮಾಡಲಾಗಿದೆ.