“ಲೈಸೆನ್ಸ್ ಬೇಡ, ಆರ್‌ಟಿಒ ರಿಜಿಸ್ಟ್ರೇಷನ್ ಬೇಡ” ಎಂಬ ಆಮಿಷಗಳಿಗೆ ಮಾರು ಹೋಗಿ ಇವಿ ಬೈಕ್ ಖರೀದಿಸಲು ಮುಂದಾಗುತ್ತಿದ್ದರೆ ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ, ಅನಧಿಕೃತ ಇವಿ ಬೈಕ್ ಶೋರೂಮ್ಗಳು ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ವಾಹನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.
ಕೆಲವು ಕಂಪನಿಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ, ರಿಜಿಸ್ಟ್ರೇಷನ್ ಮತ್ತು ಲೈಸೆನ್ಸ್ ಕಡ್ಡಾಯವಾಗಿರುವ ಬೈಕ್‌ಗಳನ್ನೇ “ಯಾವ ದಾಖಲೆಗಳೂ ಬೇಡ” ಎಂದು ಹೇಳಿ ಮಾರಾಟ ಮಾಡುತ್ತಿರುವುದಾಗಿ ದೂರುಗಳು ದಾಖಲಾಗಿವೆ. ಮಂಡ್ಯದಲ್ಲಿ ಹರಿಯಾಣ ಮೂಲದ Chitraka EV ವಿರುದ್ಧವೂ ಗ್ರಾಹಕರು ಅಧಿಕಾರಿಗಳಿಗೆ ದೂರು ನೀಡಿರುವ ಮಾಹಿತಿ ಲಭ್ಯವಾಗಿದೆ.
ಏನು ಹೇಳುತ್ತವೆ ನಿಯಮಗಳು?
ಸರ್ಕಾರದ ನಿಯಮಗಳ ಪ್ರಕಾರ: ಗಂಟೆಗೆ 25 ಕಿ.ಮೀ ಗಿಂತ ಕಡಿಮೆ ವೇಗ ಹೊಂದಿರುವ, 60 ಕೆಜಿಗಿಂತ ಕಡಿಮೆ ತೂಕದ ಇವಿ ವಾಹನಗಳಿಗೆ ಮಾತ್ರ
ಆರ್‌ಟಿಒ ನೋಂದಣಿ ಮತ್ತು ಚಾಲನಾ ಪರವಾನಗಿಯಿಂದ ವಿನಾಯಿತಿ ಸಿಗುತ್ತದೆ. ಆದರೆ ಕೆಲ ಮಾರಾಟಗಾರರು 30 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಸಂಚರಿಸುವ ವಾಹನಗಳನ್ನೂ ಇದೇ ವಿನಾಯಿತಿಯಡಿ ಬರುತ್ತವೆ ಎಂದು ಗ್ರಾಹಕರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎನ್ನಲಾಗಿದೆ.
ಇದರಿಂದಾಗುವ ಅಪಾಯ ಏನು?
- ನೋಂದಣಿ ಇಲ್ಲದ ವಾಹನ ರಸ್ತೆ ಅಪಘಾತದಲ್ಲಿ ಸಿಲುಕಿದರೆ ಕಾನೂನು ಸಮಸ್ಯೆಗಳು ಎದುರಾಗಬಹುದು.
- ಇನ್ಶೂರೆನ್ಸ್ ಇಲ್ಲದಿದ್ದರೆ ಪರಿಹಾರ ಸಿಗದೇ ಹೋಗುವ ಸಾಧ್ಯತೆ ಇದೆ.
- ಸರ್ಕಾರದ ಮಾನ್ಯತೆ ಇಲ್ಲದ ವಾಹನಗಳ ಸುರಕ್ಷತೆ ಬಗ್ಗೆ ಅನುಮಾನಗಳು ಉಂಟಾಗಬಹುದು.
ಇವಿ ಬೈಕ್ ಖರೀದಿಸುವ ಮುನ್ನ ಗಮನಿಸಬೇಕಾದ 3 ಅಂಶಗಳು
- “ಲೈಸೆನ್ಸ್ ಬೇಡ” ಎಂಬ ಮಾತನ್ನು ತಕ್ಷಣ ನಂಬಬೇಡಿ.
- ವಾಹನದ ಗರಿಷ್ಠ ವೇಗ 25 ಕಿ.ಮೀ ಗಿಂತ ಹೆಚ್ಚು ಇದ್ದರೆ ನಂಬರ್ ಪ್ಲೇಟ್ ಹಾಗೂ ಆರ್‌ಟಿಒ ನೋಂದಣಿ ಕಡ್ಡಾಯ.
- ಬೈಕ್‌ಗೆ ICAT ಅಥವಾ ARAI ಮಾನ್ಯತೆ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಜೊತೆಗೆ ಇನ್ಶೂರೆನ್ಸ್ ಮಾಡಿಸಿಕೊಳ್ಳುವುದು ಅತ್ಯವಶ್ಯಕ.
ಗ್ರಾಹಕರು ಕಡಿಮೆ ಬೆಲೆ ಅಥವಾ ಆಫರ್‌ಗಳಿಗೆ ಮಾರು ಹೋಗದೆ, ಸರ್ಕಾರದ ನಿಯಮಗಳನ್ನು ಪರಿಶೀಲಿಸಿ ಸುರಕ್ಷಿತವಾಗಿ ವಾಹನ ಖರೀದಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

















