ವಾರಣಾಸಿ: ಜ್ಞಾನವಾಪಿ ಪ್ರಕರಣದಲ್ಲಿ, ಅಸ್ತಿತ್ವದಲ್ಲಿರುವ ಕಟ್ಟಡವನ್ನು ನಿರ್ಮಿಸುವ ಮೊದಲಿಗೂ ಅಲ್ಲೊಂದು ದೊಡ್ಡ ಹಿಂದೂ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಇಲಾಖೆಯ ಸರ್ವೆಯ ವರದಿ ತಿಳಿಸಿದೆ ಹಿಂದೂ ಪಕ್ಷದ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.
ಪುರಾತತ್ವ ಇಲಾಖೆಯ ಸಮೀಕ್ಷೆಯು ಶಿವಲಿಂಗ-ಕಾರಂಜಿ ಚರ್ಚೆಗೆ ಪೂರ್ಣವಿರಾಮ ನೀಡಲಿದೆ ಎಂದು ಹಿಂದೂ ಅರ್ಜಿದಾರರ ಪಕ್ಷವನ್ನು ಪ್ರತಿನಿಧಿಸುವ ವಕೀಲರು ಹೇಳಿದ್ದಾರೆ.
ವಾರಣಾಸಿ ನ್ಯಾಯಾಲಯವು ಈ ವಾರದ ಆರಂಭದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಮತ್ತು ಎರಡೂ ಕಡೆಯವರಿಗೆ ಅದರ ಪ್ರತಿಗಳನ್ನು ನೀಡುವಂತೆ ಕೇಳಿಕೊಂಡಿತ್ತು.
ಜುಲೈ 2023 ರಲ್ಲಿ ನೀಡಿದ ಜಿಲ್ಲಾ ನ್ಯಾಯಾಲಯದ ಆದೇಶದ ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಜ್ಞಾನವಾಪಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿತು. ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಎ.ಎಸ್.ಐ ಪ್ರಯತ್ನಿಸಿತ್ತು.
ಅಸ್ತಿತ್ವದಲ್ಲಿರುವ ಕಟ್ಟಡವನ್ನು ನಿರ್ಮಿಸುವ ಮೊದಲು ದೊಡ್ಡ ಹಿಂದೂ ದೇವಾಲಯವಿತ್ತು ಎಂದು ಎ.ಎಸ್.ಐ ತನ್ನ ಅಂತಿಮ ವರದಿಯಲ್ಲಿ ಹೇಳಿದೆ. ಇದು ಇಲಾಖೆಯ ನಿರ್ಣಾಯಕ ಸಂಶೋಧನೆಯಾಗಿದೆ ಎಂದು ವಕೀಲ ವಿಷ್ಣು ಶಂಕರ್ ಜೈನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.