‘ಟಾಕ್ಸಿಕ್’ ಸಿನಿಮಾ ತಡವಾಗಲು ಬಲವಾದ ಕಾರಣಗಳಿವೆ- ನಟಿ ತಾರಾ ಸುತಾರಿಯಾ

ರಾಕಿಂಗ್ ಸ್ಟಾರ್ ಯಶ್ Yash ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ Toxic ಬಿಡುಗಡೆಯ ಮುಂದೂಡಲ್ಪಡುತ್ತಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿರುವ ನಡುವೆಯೇ, ನಟಿ ತಾರಾ ಸುತಾರಿಯಾ Tara Sutaria ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಬಿಡುಗಡೆ ವಿಳಂಬವಾಗುತ್ತಿರುವುದಕ್ಕೆ ಹಲವು ತಾರ್ಕಿಕ ಮತ್ತು ಬಲವಾದ ಕಾರಣಗಳಿವೆ ಎಂದು ಅವರು ಹೇಳಿದ್ದಾರೆ.

ಆರಂಭದಲ್ಲಿ ‘ಟಾಕ್ಸಿಕ್’ ಚಿತ್ರವನ್ನು ಮಾರ್ಚ್ 19ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ನಂತರ ಮಧ್ಯಪ್ರಾಚ್ಯದಲ್ಲಿ ನಡೆದ ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆ ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಲಾಯಿತು. ಬಳಿಕ ಚಿತ್ರದ ಜಾಗತಿಕ ವಿತರಣೆ ಹಾಗೂ ಕಾರ್ಯತಂತ್ರದ ಕೆಲಸಗಳ ಕಾರಣದಿಂದ ಸಿನಿಮಾ ಮತ್ತಷ್ಟು ತಡವಾಗಿರುವುದಾಗಿ ತಿಳಿದುಬಂದಿದೆ.

ಈ ಕುರಿತು ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಜೊತೆ ಮಾತನಾಡಿದ ತಾರಾ ಸುತಾರಿಯಾ, “ನಾನು ಯಾವಾಗಲೂ ದೊಡ್ಡ ಚಿತ್ರಣವನ್ನು ಗಮನಿಸುತ್ತೇನೆ. ಸಿನಿಮಾ ಕೇವಲ ನನ್ನದೇ ಅಲ್ಲ, ಇಡೀ ತಂಡದ ಶ್ರಮದ ಫಲ. ನಿರ್ಮಾಪಕರು ಮತ್ತು ನಿರ್ದೇಶಕರು ತೆಗೆದುಕೊಳ್ಳುವ ನಿರ್ಧಾರಗಳ ಹಿಂದೆ ಬಲವಾದ ಕಾರಣಗಳಿರುತ್ತವೆ. ಪ್ರೇಕ್ಷಕರು ಸಿನಿಮಾ ನೋಡಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದು ನನಗೆ ಗೊತ್ತಿದೆ. ನನಗೂ ಅದೇ ಕುತೂಹಲ ಇದೆ. ಆದರೆ ಈ ಕಾಯುವಿಕೆ ಖಂಡಿತವಾಗಿಯೂ ಸಾರ್ಥಕವಾಗಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಸಿನಿಮಾ ಎರಡನೇ ಬಾರಿ ಮುಂದೂಡಲ್ಪಟ್ಟಾಗ ಯಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. “ಕೆಲವು ಸಿನಿಮಾಗಳು ಚಿತ್ರರಂಗದ ಮೇಲೆ ಇರುವ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಟಾಕ್ಸಿಕ್ ಅಂತಹ ಒಂದು ವಿಶೇಷ ಪ್ರಯಾಣ”  ಎಂದು ಅವರು ಬರೆದುಕೊಂಡಿದ್ದರು