ಮಂಗಳೂರು:ತುಳು ಸಾಹಿತ್ಯ ಅಕಾಡೆಮಿ, ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದೆರ್ ಕುಡ್ಲ ಮತ್ತು ತುಳುವ ಬೊಳ್ಳಿ ಪ್ರತಿಷ್ಠಾನ ನಮ್ಮ ಟಿವಿ ಸಹಕಾರದೊಂದಿಗೆ ಮಂಗಳೂರಿನ ತುಳುಭವನ ಆಯೋಜಿಸಿದ್ದ “ನಾಟಕ ಪರ್ಬ” ಮೂರನೇ ದಿನದ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಾಲ್ಸರ್, ಮುಂಬೈ ಕಲಾ ಜಗತ್ತಿನ ಪ್ರಸಿದ್ಧ ನಾಟಕಕಾರ ವಿಜಯ್ ಕುಮಾರ್ ಶೆಟ್ಟಿ ತೋನ್ಸೆ, ತುಳು ರಂಗಭೂಮಿ ಹಾಗೂ ಚಲನಚಿತ್ರದ ಖ್ಯಾತ ನಿರ್ದೇಶಕ, ರಂಗಕರ್ಮಿ ವಿಜಯ್ ಕುಮಾರ್ ಕೋಡಿಯಾಲ್ ಬೈಲ್, ಸಂಗೀತ ನಿರ್ದೇಶಕರಾದ ಮಂದಾರ ರಾಜೇಶ್ ಭಟ್, ಕಲಾ ನಿರ್ದೇಶಕರಾದ ತಮ್ಮ ಲಕ್ಷ್ಮಣ, ಉದ್ಯಮಿಗಳು ಉಮೇಶ್ ಕುಮಾರ್, ಮುಖೇಶ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.
ತುಳು ಅಕಾಡೆಮಿಯಿಂದ ನಾಟಕ, ಸಾಹಿತ್ಯ ಸಂಬಂಧ ಪಟ್ಟಂತೆ ಇಂತಹ ವಿಭಿನ್ನ ಕಾರ್ಯಕ್ರಮಗಳು ಕಲಾವಿದರಿಗೆ ಆಶಾಭಾವನೆ ಮೂಡಿಸುತ್ತದೆ ಎಂದು ವಿಜಯ್ ಕುಮಾರ್ ತೋನ್ಸೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಹಲವಾರು ತಿಂಗಳುಗಳಿಂದ ಕೊರೊನಾ ಮಹಾಮಾರಿಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಕಲಾ ಚೇತನಗಳಿಗೆ ಹುರುಪು ನೀಡುವ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ಆಯೋಜಿಸಬೇಕು, ಸದ್ಯದಲ್ಲೇ ರಂಗಭೂಮಿ ಚಟುವಟಿಕೆಗಳು ಪ್ರಾರಂಭವಾಗಲಿದೆ ಎಂದು ವಿಜಯ್ ಕುಮಾರ್ ಕೋಡಿಯಾಲ್ ಬೈಲ್ ಹೇಳಿದರು.
ತದನಂತರ ಸಿಂಧೂರ ಕಲಾವಿದರು ಕಾರ್ಕಳ ತಂಡದ “ಆರ್ ಏರ್” ನಾಟಕ ಪ್ರದರ್ಶನವಾಯಿತು.
ದಯಾನಂದ ಕತ್ತಾಲ್ಸರ್ ಅವರು ವಂದಿಸಿ, ಕಡಬ ದಿನೇಶ್ ರೈ ಅವರು ಕಾರ್ಯಕ್ರಮ ನಿರೂಪಿಸಿದರು.