ತೆಕ್ಕಟ್ಟೆಯಲ್ಲಿ ಸ್ತ್ರೀ ಗೃಹಂ ರಕ್ಷತಿ ಏಕ ವ್ಯಕ್ತಿ ರಂಗ ಪ್ರಯೋಗ

ಉಡುಪಿ : ಪ್ರತಿಯೊಬ್ಬನ ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಿದ್ದರೆ ಅದಕ್ಕಿಂತ ದೊಡ್ಡ ಸಂಪತ್ತಿಲ್ಲ. ಮನೆ ನೆಮ್ಮದಿಯಾಗಿ ಇರಬೇಕಾದರೆ ಮನೆಯ ಯಜಮಾನಿ ಸಂತೋಷದಿಂದ ಇರುವುದು ಅತೀ ಮುಖ್ಯ. ಇದನ್ನು ಅರಿತು ಬಾಳಿದವನ ಬದುಕು ಹಸನಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಶನಿವಾರ ತೆಕ್ಕಟ್ಟೆಯ ಶ್ರೀ ಹಯಗ್ರೀವ ಸಭಾಂಗಣದಲ್ಲಿ ಭಾವಭೂಮಿ ಕುಂದಾಪುರ, ಧಮನಿ ತೆಕ್ಕಟ್ಟೆ, ಯಶಸ್ವಿ ಕಲಾವೃಂದ ತೆಕ್ಕಟ್ಟೆ ಇವರ ಸಹಯೋಗದಲ್ಲಿ ದಿವ್ಯಾ ಶ್ರೀಧರ ರಾವ್ ರಚಿಸಿ, ನಾಗೇಶ್ ಕೆದೂರು ಅವರ ನಿದೇರ್ಶನದ ಶಶಿಕಾಂತ್ ಶೆಟ್ಟಿ ಕಾರ್ಕಳದ ಅಭಿನಯದಲ್ಲಿ ಪ್ರಸ್ತುತಿಗೊಂಡ ‘ಸ್ತ್ರೀ ಗೃಹಂ ರಕ್ಷತಿ’ ಏಕ ವ್ಯಕ್ತಿ ರಂಗ ಪ್ರಯೋಗದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವ ಮನೆಯಲ್ಲಿ ಸ್ತ್ರೀಗೆ ರಕ್ಷಣೆ ಇದೆಯೋ ಅದು ದೇವಾಲಯ ಇದ್ದ ಹಾಗೆ ಎಂಬ ಮಾತಿದೆ. ಇದೀಗ ಈ ಸಂದೇಶವನ್ನು ರಂಗಭೂಮಿ ಮೂಲಕ ಶಶಿಕಾಂತ್ ಶೆಟ್ಟಿ ಕಾರ್ಕಳ ಅವರು ಸ್ತ್ರೀ ಸಂವೇದನೆಯೊoದಿಗೆ ಅಭಿನಯಿಸಿ ತೋರಿಸುತ್ತಿದ್ದಾರೆ. ಕೊಳ್ಯೂರು ರಾಮಚಂದ್ರ ಹೆಗಡೆ ಅವರ ನಂತರ ಸಮರ್ಥ ಸ್ತ್ರೀ ಪಾತ್ರಕ್ಕೆ ಜೀವತುಂಬ ಬಲ್ಲ ಒಬ್ಬ ಸಮರ್ಥ ಕಲಾವಿದರೆಂದೇ ಖ್ಯಾತಿ ಪಡೆದ ಶಶಿಕಾಂತ್ ಶೆಟ್ಟಿ ಅವರೇ ಅಭಿನಯಿಸುತ್ತಿದ್ದಾರೆ ಎಂದರೆ ಇನ್ನೇನೂ ಹೇಳಲಿಕ್ಕಿಲ್ಲ. ಈ ಪ್ರಯೋಗ ಯಶಸ್ವಿಯಾಗಿ ಸಾವಿರಾರು ಪ್ರದರ್ಶನಗಳನ್ನು ಕಾಣುವಂತಾಗಲಿ ಎಂದು ಅವರು ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಳ್ಳಿ ರಾಮಚಂದ್ರ ಶಾಸ್ತ್ರಿ ಮಾತನಾಡಿ, ಶಶಿಕಾಂತ ಶೆಟ್ಟಿ ಅವರನ್ನು ಯಕ್ಷಗಾನದಲ್ಲಿ ಮಾತ್ರ ನೋಡಿದ್ದೇವೆ, ಇದೀಗ ರಂಗಭೂಮಿಯಲ್ಲೂ ಅವರ ಏಕ ಪಾತ್ರಾಭಿನಯವನ್ನು ಕಾಣುವ ಸುಯೋಗ ಲಭಿಸಿದೆ. ಮನೆಯಲ್ಲಿ ಗೃಹಿಣಿ ಸರಿಯಾಗಿದ್ದರೆ ಮಾತ್ರ ಆ ಗೃಹ ಉನ್ನತ ಸ್ಥಾನಕ್ಕೆ ಹೋಗುತ್ತದೆ ಎಂಬ ಮಾತಿದೆ ಎಂದರು.

ಹಿರಿಯ ಯಕ್ಷಗಾನ ಕಲಾವಿದ ಎಸ್. ಜನಾರ್ದನ ಹಂದೆ ಮಾತನಾಡಿ, ಅಭಿನಯ ಹೃದಯ ತುಂಬಿ ಬಂದಾಗ ಮಾತ್ರ ಪಾತ್ರ ಯಶಸ್ಸು ಕಾಣುತ್ತದೆ. ಇದಕ್ಕೆ ಕಲಾವಿದರು ಬಹಳ ಶ್ರಮ ಪಡಬೇಕಾಗುತ್ತದೆ. ನಟನೆ ಅಷ್ಟು ಸುಲಭದಲ್ಲಿ ಕೈ ಹಿಡಿಯದು. ಭಾವತಲ್ಲೀನತೆ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ದಿವ್ಯಾ ಶ್ರೀಧರ ರಾವ್, ವೆಂಕಟೇಶ ವೈದ್ಯ ತೆಕ್ಕಟ್ಟೆ, ನಂದೀಶ್ ಶೆಟ್ಟಿ ಅಲ್ತಾರು. ಸುಧೀರ್ ಶೆಟ್ಟಿ ಮಲ್ಯಾಡಿ, ಶ್ರೀಶ ತೆಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಅಕ್ಷತಾ ಕುಲಕರ್ಣಿ ನಿರೂಪಿಸಿದರು.