ವಿಶ್ವದ ಏಕೈಕ ‘ಓಂ’ ಆಕಾರದ ಶಿವ ದೇವಾಲಯ; ಇಲ್ಲಿದೆ 1,008 ಶಿವಲಿಂಗಗಳು

ದೇವಾಲಯಗಳ ವಾಸ್ತುಶಿಲ್ಪವೇ ಒಂದು ಅದ್ಭುತ. ‘ಓಂ ಆಶ್ರಮ’ ತನ್ನ ವಿಶಿಷ್ಟ ಆಕಾರದಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ‘ಓಂ’ ಸಂಕೇತದ ಆಕಾರದಲ್ಲಿ ನಿರ್ಮಿಸಲಾದ ಭವ್ಯ ದೇವಾಲಯವು ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ಅಪರೂಪದ ಸಂಗಮವಾಗಿದ್ದು, ರಾಜಸ್ಥಾನದ ಪಾಲಿ ಜಿಲ್ಲೆಯ ಜಾದನ್ ಗ್ರಾಮದಲ್ಲಿದೆ ಈ ದೇವಾಲಯ. ಸುಮಾರು 250 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ದೇವಾಲಯ ಸಂಕೀರ್ಣವು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಸುಮಾರು 2,000 ಕಂಬಗಳ ಮೇಲೆ ನಿಂತಿರುವ ಮುಖ್ಯ ರಚನೆ ಸುಮಾರು 135 ಅಡಿ ಎತ್ತರ ಹೊಂದಿದೆ.

1,008 ಶಿವಲಿಂಗಗಳು, 12 ಜ್ಯೋತಿರ್ಲಿಂಗಗಳ ಪ್ರತಿಕೃತಿ!

ಈ ದೇವಾಲಯದ ಪ್ರಮುಖ ವಿಶೇಷತೆಯೆಂದರೆ ಇಲ್ಲಿ 1,008 ಶಿವಲಿಂಗಗಳು ಪ್ರತಿಷ್ಠಾಪಿಸಲ್ಪಟ್ಟಿವೆ. ಜೊತೆಗೆ ದೇಶದ ಪ್ರಸಿದ್ಧ 12 ಜ್ಯೋತಿರ್ಲಿಂಗಗಳ ಪ್ರತಿಕೃತಿಗಳನ್ನೂ ಇಲ್ಲಿ ಕಾಣಬಹುದು. 108 ಕೊಠಡಿಗಳು ಹಾಗೂ ಕೃತಕ ಸರೋವರವೂ ದೇವಾಲಯದ ಪ್ರಮುಖ ಆಕರ್ಷಣೆಗಳಾಗಿವೆ.

1995ರಲ್ಲಿ ನಿರ್ಮಾಣ ಆರಂಭ

ಈ ಭವ್ಯ ದೇವಾಲಯದ ನಿರ್ಮಾಣ ಕಾರ್ಯವು 1995ರಲ್ಲಿ ಆರಂಭವಾಯಿತು. ವಿಶ್ವಗುರು ಮಹೇಶ್ವರಾನಂದ ಪುರಿಜಿ ಮಹಾರಾಜ್ ಅವರ ಕಲ್ಪನೆಯ ಫಲವಾಗಿ ರೂಪುಗೊಂಡಿರುವ ಈ ಸ್ಥಳ ಇಂದು ಭಕ್ತರು ಮತ್ತು ಪ್ರವಾಸಿಗರ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿದೆ.

ಭೇಟಿ ಸಮಯ: ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ಪ್ರವೇಶವಿದೆ.

‘ಓಂ’ ಎಂಬ ಪವಿತ್ರ ಸಂಕೇತವನ್ನೇ ದೇವಾಲಯದ ರೂಪದಲ್ಲಿ ಕಣ್ತುಂಬಿಕೊಳ್ಳಬೇಕೆಂದರೆ, ರಾಜಸ್ಥಾನದ ಈ ಸ್ಥಳ ನಿಜಕ್ಕೂ ವಿಶೇಷ ಅನುಭವ ನೀಡುತ್ತದೆ.