ಲೇಹ್: ನಮ್ಮ ಯೋಧರ ಶೌರ್ಯ, ತ್ಯಾಗ ಇಡೀ ಜಗತ್ತಿಗೆ ಗೊತ್ತಿದೆ. ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು, ಕೋಪವನ್ನು ನೋಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗಾಲ್ವನ್ ಕಣಿವೆಯಲ್ಲಿ ಭಾರತ–ಚೀನಾ ಯೋಧರ ನಡುವೆ ಸಂಘರ್ಷ ನಡೆದು ಎರಡು ವಾರಗಳ ಬಳಿಕ ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿಯವರು ಯೋಧರನ್ನು ಉದ್ದೇಶಿಸಿ ಮಾತನಾಡಿದರು.
ನಿಮ್ಮ ಶೌರ್ಯದ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದಾರೆ. ನಿಮ್ಮ ಸಾಹಸಗಾಥೆ ದೇಶದ ಪ್ರತಿಯೊಂದು ಮನೆಯಲ್ಲಿಯೂ ಪ್ರತಿಧ್ವನಿಸುತ್ತಿದೆ. ಗಾಲ್ವನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಿಗೆ ಮತ್ತೊಮ್ಮೆ ಗೌರವ ಸಲ್ಲಿಸುತ್ತಿದ್ದೇನೆ’ ಎಂದರು.
ವಿಸ್ತರಣೆಯ ಕಾಲ ಮುಗಿದಿದೆ. ಇದು ಅಭಿವೃದ್ಧಿಯ ಯುಗ. ಭೂಪ್ರದೇಶ ವಿಸ್ತರಣೆಗೆ ಹೊರಟವರು ಸೋಲನುಭವಿಸಿ, ಓಡಿಹೋದದಕ್ಕೆ ಇತಿಹಾಸ ಸಾಕ್ಷಿಯಾಗಿದೆ’ ಎಂದು ಅವರು ಹೇಳಿದ್ದಾರೆ.
ನಿಮ್ಮ ಧೈರ್ಯ, ಸಾಮರ್ಥ್ಯ ಪರ್ವತಕ್ಕಿಂತಲೂ ಎತ್ತರದಲ್ಲಿದೆ. ನೀವು ಯುದ್ಧ ಭೂಮಿಯಲ್ಲಿ ತೋರಿದ ಸಾಹಸ ಭಾರತ ಮಾತೆಯ ಶಕ್ತಿ ಏನೆಂಬುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಹೇಳಿದರು.
ದುರ್ಬಲರಿಂದ ಶಾಂತಿ ನೀರಿಕ್ಷೆ ಮಾಡಲು ಆಗಲ್ಲ, ಶಾಂತಿ ಸ್ಥಾಪಿಸಲು ಧೈರ್ಯವೂ ಬೇಕು. ಶಾಂತಿ ಸ್ಥಾಪನೆಯಲ್ಲಿ ನಾವು ಜಯ ಸಾಧಿಸಿದ್ದನ್ನು ಜಗತ್ತು ನೋಡಿದೆ. ಮಾನವೀಯತೆಯ ಸುಧಾರಣೆಗಾಗಿ ನಾವು ಕೆಲಸ ಮಾಡಿದ್ದೇವೆ’ ಎಂದರು.