ಆಸ್ಪತ್ರೆಯ ಕಚೇರಿಯಲ್ಲೇ ಆರೋಗ್ಯಾಧಿಕಾರಿಯ ರಾಸಲೀಲೆ; ಮಹಿಳಾ ಸಿಬ್ಬಂದಿ ಜೊತೆಗೆ ಚೆಲ್ಲಾಟವಾಡುತ್ತಿರುವ ವಿಡಿಯೋ ವೈರಲ್

ಮಂಗಳೂರು: ಇಲ್ಲಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್ ಕಾಮಪುರಾಣ ಬಟಾಬಯಲಾಗಿದೆ. ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿ ಜೊತೆಗೆ ಚೆಲ್ಲಾಟ ಆಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈತ ಆಸ್ಪತ್ರೆಯ 9 ಮಂದಿ ಮಹಿಳಾ ಸಿಬ್ಬಂದಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ, ತನ್ನ ತೊಡೆಯ ಓರ್ವ ಮಹಿಳೆಯನ್ನು ಕೂರಿಸಿದ್ದಾನೆ. ಮಹಿಳಾ ಸಿಬ್ಬಂದಿ ಮೂಲಕ ರತ್ನಾಕರ್ ಪಾದ ಸೇವೆಯನ್ನು ಮಾಡಿಸಿಕೊಂಡಿದ್ದಾನೆ. ಇಬ್ಬಿಬ್ಬರು ಮಹಿಳಾ ಸಿಬ್ಬಂದಿಯನ್ನು ಕೂರಿಸಿಕೊಂಡು ರತ್ನಾಕರ್ ಆಸ್ಪತ್ರೆಯಲ್ಲಿಯೇ ರಂಗಿನಾಟ ಆಡಿದ್ದಾನೆ.

ಸರ್ಕಾರಿ ವೈದ್ಯನಾಗಿರುವ ರತ್ನಾಕರ್ ಆಯುಷ್ಮಾನ್ ನೋಡೆಲ್ ಆಫೀಸರ್ ಕೂಡ ಆಗಿದ್ದಾನೆ. ಒಂದು ವೇಳೆ ರತ್ನಾಕರ್ ಜೊತೆಗೆ ಸಹಕರಿಸದ ಸಿಬ್ಬಂದಿಯನ್ನು ಕೆಲಸದಿಂದ ತೆಗೆಸುವ ಅಥವಾ ಟ್ರಾನ್ಸ್‍ಫರ್ ಮಾಡಿಸುವ ಹೀಗೆ ಹಲವಾರು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಕೇಳಿ ಬಂದಿದೆ.

ಈ ಭಯಕ್ಕೆ ಮಹಿಳಾ ಸಿಬ್ಬಂದಿ ಆತ ಹೇಳಿದಂತೆ ಕೇಳುತ್ತಿದ್ದರು. ರತ್ನಾಕರ ಕಿರುಕುಳದಿಂದ ನೊಂದ ಮಹಿಳೆಯರು ಆರೋಪಿ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.