ಉದಯಪುರ ಅಮಾಯಕನ ಶಿರಚ್ಛೇದಗೈದ ಇಬ್ಬರು ಭಯೋತ್ಪಾದಕರಿಗೆ ಅದೇ ಮಾದರಿಯ ಶಿಕ್ಷೆಯಾಗಲಿ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಎಂಬ ಅಮಾಯಕ ವ್ಯಕ್ತಿಯ ಶಿರಚ್ಛೇದಗೈದು ಹತ್ಯೆ ಮಾಡಿರುವ ಭಯೋತ್ಪಾದಕ ಜಂತುಗಳನ್ನು ಕೇವಲ ವ್ಯಕ್ತಿಗಳು ಮಾಡಿದ ಕೃತ್ಯ ಎಂದು ಸಂಭೋಧಿಸಿ, ಇಂತಹ ಘಟನೆಗಳು ಬಿಜೆಪಿ ಪ್ರೇರಿತ ಭಯೋತ್ಪಾದನೆ ಎಂದಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಪ್ರಚೋದನಕಾರಿ ಹೇಳಿಕೆ ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದಿರುವ ಬಿ.ಕೆ. ಹರಿಪ್ರಸಾದ್ ರವರಿಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವಧಿಯಲ್ಲಿ‌ ರಾಜ್ಯಾದ್ಯಂತ ನಡೆದಿರುವ ಹಿಂದೂ ಕಾರ್ಯಕರ್ತರ ಮಾರಣಹೋಮ ಮರೆತು ಹೋಯಿತೆ? ಧರ್ಮದ ಹೆಸರಲ್ಲಿ ರಾಜಕಾರಣ ಎಂದು ಕೇವಲ ಹಿಂದೂ ಸಮಾಜಕ್ಕೆ ಮಾತ್ರ ಬುದ್ಧಿ ಹೇಳುವ ಬಿ.ಕೆ. ಹರಿಪ್ರಸಾದ್ ರವರ ಮಾನಸಿಕತೆ ಮತ್ತು ಅತಿ ಬುದ್ಧಿವಂತಿಕೆಯನ್ನು ರಾಜ್ಯದ ಜನತೆ ಚೆನ್ನಾಗಿಯೇ ಅರಿತುಕೊಂಡಿದ್ದಾರೆ.

ಕಾಶ್ಮೀರದಲ್ಲಿರುವ ಕಾಶ್ಮೀರಿ ಪಂಡಿತರಿಗೆ ರಕ್ಷಣೆ ಇಲ್ಲ ಎಂದು ಅತಿ ಕಾಳಜಿ ತೋರುವ ಬಿ.ಕೆ. ಹರಿಪ್ರಸಾದ್ ರವರಿಗೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ನೆನಪಿಲ್ಲವೆ? ಹಿಂದೂ ಕಾರ್ಯಕರ್ತರ ಘಟನೆಗಳನ್ನು ಉಲ್ಲೇಖಿಸಿ ಬೋಧನೆ ಮಾಡುವವರಿಗೆ ಮಂಗಳೂರು ಗಲಭೆ, ಡಿ.ಜೆ. ಹಳ್ಳಿ ಕೆ.ಜೆ. ಹಳ್ಳಿ, ಹುಬ್ಬಳ್ಳಿ ಹಾಗೂ ಶಿವಮೊಗ್ಗ ಘಟನೆಗಳು ಕೂಡಾ ನೆನಪಿಗೆ ಬಾರದಿರುವುದು ವಿಪರ್ಯಾಸ. ಪ್ರಜಾಪ್ರಭುತ್ವ, ಸಂವಿಧಾನ ಎಂದು ಮಹಾ ಮೇಧಾವಿಗಳಂತೆ ಬೊಗಳೆ ಬಿಡುವ ಕಾಂಗ್ರೆಸ್ ನಾಯಕರ ಹಿಂದೂ ವಿರೋಧಿ ಹೇಳಿಕೆಗಳು ಮತ್ತು ಒಂದೇ ಕೋಮಿನ ಅತಿಯಾದ ಓಲೈಕೆ ಇಂತಹ ಭಯೋತ್ಪಾದನಾ ಹೇಯ ಕೃತ್ಯಗಳಿಗೆ ಪ್ರೇರಣೆಯಾಗಿದೆ.

ಉದಯಪುರದಲ್ಲಿ ನಡೆದ ಅಮಾಯಕ‌ ಟೈಲರ್ ನ ಬರ್ಬರ ಹತ್ಯೆ ನಾಗರಿಕ ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು ಅಪರಾಧಿಗಳಿಗೆ ಅದೇ ಮಾದರಿಯಲ್ಲಿ ಕಾನೂನು ರೀತ್ಯಾ ಉಗ್ರ ಶಿಕ್ಷೆಯನ್ನು ನೀಡುವ ಮೂಲಕ ಸಮಾಜ ಕಂಟಕರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.