ಬ್ಯಾಂಕಾಕ್: ಥಾಯ್ಲೆಂಡ್ ಸರ್ಕಾರವು 22 ವರ್ಷಗಳ ಹಿಂದೆ ಪ್ರೀತಿಯಿಂದ ಶ್ರೀಲಂಕಾಗೆ ಉಡುಗೊರೆಯಾಗಿ ಕೊಟ್ಟಿದ್ದ 29 ವರ್ಷದ ಆನೆ ‘ಮುತ್ತುರಾಜ’ ಅಥವಾ ‘ಸ್ಯಾಕ್ ಸುರೀನ್’ನನ್ನು ಹಿಂಪಡೆದಿದೆ. ಶ್ರೀಲಂಕಾದಿಂದ ಆನೆಯನ್ನು ವಾಪಸ್ ತರಿಸಿಕೊಳ್ಳಲು ಥಾಯ್ಲೆಂಡ್ ಸರ್ಕಾರ 5.75 ಕೋಟಿ ರೂ. ಖರ್ಚು ಮಾಡಿದೆ. 4 ಸಾವಿರ ಕೆಜಿ ತೂಕದ ಮುತ್ತುರಾಜನನ್ನು ವಿಮಾನದ ಮೂಲಕ ಥಾಯ್ಲೆಂಡ್‌ಗೆ ತರಿಸಿಕೊಳ್ಳಲಾಗಿದೆ. ಲೋಹದ ಪಂಜರದಲ್ಲಿ ಆನೆಯನ್ನು ಸುಮಾರು 5 ಗಂಟೆಗಳಲ್ಲಿ ಥಾಯ್ಲೆಂಡ್‌ಗೆ ಸಾಗಿಸಲಾಗಿದೆ.
ಶ್ರೀಲಂಕಾ ನಡೆಯಿಂದ ಥಾಯ್ಲೆಂಡ್ ಗೆ ಬೇಸರ:
ಕೊಟ್ಟ ಉಡುಗೊರೆಗೆ ಸರಿಯಾದ ಗೌರವ ನೀಡದ ಶ್ರೀಲಂಕಾ ನಡೆಯಿಂದ ಬೇಸರಗೊಂಡ ಥಾಯ್ಲೆಂಡ್, ಶ್ರೀಲಂಕಾ ಮೇಲಿನ ರಾಜತಾಂತ್ರಿಕ ಮುನಿಸಿನೊಂದಿಗೆ ಮುತ್ತುರಾಜನನ್ನು ಮರಳಿ ಕರೆಸಿಕೊಂಡಿದೆ. ಸ್ಯಾಕ್ ಸುರೀನ್ ಹೆಸರಿನ ಆನೆಯನ್ನು 2001ರಲ್ಲಿ ಥಾಯ್ಲೆಂಡ್‌ನ ರಾಜಮನೆತನ ಶ್ರೀಲಂಕಾದ ಕಂಡೆ ವಿಹಾರ್ಯಾ ಬೌದ್ಧ ದೇಗುಲಕ್ಕೆ ಉಡುಗೊರೆಯಾಗಿ ನೀಡಿತ್ತು. ಬಳಿಕ ಈ ಆನೆಗೆ ಮುತ್ತುರಾಜ ಎಂದು ಮರುನಾಮಕರಣ ಮಾಡಲಾಗಿತ್ತು.
ಆದರೆ ಮುತ್ತುರಾಜನನ್ನು ಸರಿಯಾಗಿ ಆರೈಕೆ ಮಾಡದೆ, ಹಿಂಸಿಸಲಾಗುತ್ತಿದೆ ಎಂದು ರ‍್ಯಾಲಿ ಫಾರ್ ಅನಿಮಲ್ ರೈಟ್ಸ್ ಅಂಡ್ ಎನ್ವಿರಾನ್ಮೆಂಟ್ (ರೇರ್) ಆರೋಪಿಸಿದ ಹಿನ್ನೆಲೆಯಲ್ಲಿ ಸಿಟ್ಟಾದ ಥಾಯ್ಲೆಂಡ್ ಸರ್ಕಾರ ಕೊಟ್ಟ ಉಡುಗೊರೆಯನ್ನು ಹಿಂಪಡೆದಿದೆ.
ಮುತ್ತುರಾಜನ ಸ್ಥಿತಿಯನ್ನು ಗಮನಿಸಲು ಥಾಯ್ಲೆಂಡ್ ನಿಯೋಗವು ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾಗ ಆನೆಯ ಕಾಲುಗಳಲ್ಲಿ ಬಾವು ಕಂಡುಬಂದಿತ್ತು. ಮರದ ದಿಮ್ಮಿಗಳನ್ನು ಸಾಗಿಸಲು ಆನೆಯನ್ನು ಒತ್ತಾಯಿಸಲಾಗುತ್ತಿತ್ತು. ಇದರಿಂದ ಸಿಟ್ಟಿಗೆದ್ದ ಥಾಯ್ಲೆಂಡ್ ಸರ್ಕಾರ ಮುತ್ತುರಾಜನನ್ನು ವಾಪಸ್ ಕರೆಸಿಕೊಂಡಿದೆ. ಸದ್ಯ ಮುತ್ತುರಾಜ ಲ್ಯಾಂಪ್ಯಾಂಗ್ ನಲ್ಲಿರುವ ಥಾಯ್ ಆನೆ ಸಂರಕ್ಷಣಾ ಕೇಂದ್ರದಲ್ಲಿ 30 ದಿನಗಳ ಕ್ವಾರಂಟೈನ್‌ನಲ್ಲಿದ್ದಾನೆ.