ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಬಹುಚರ್ಚಿತ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ವಿಡಿಯೋದಲ್ಲಿ ಮಾಡಲಾದ ಆರೋಪಗಳು ಕಟ್ಟುಕಥೆಯಾಗಿದ್ದು, ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಸುಳ್ಳು ಆರೋಪಗಳಾಗಿವೆ ಎಂಬುದು ತನಿಖೆಯಿಂದ ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಸಿಸಿಬಿ ಪೊಲೀಸರು ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ವಿಚಾರಣೆಗೊಳಪಡಿಸಿದ್ದಾರೆ. ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆ ನಡೆಸಿ, ಅವರ ಹೇಳಿಕೆಗಳು ಹಾಗೂ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗಿದೆ. ಈ ಪರಿಶೀಲನೆಯಲ್ಲಿ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಸತ್ಯಾಂಶ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
2023ರಲ್ಲಿ ಚಿತ್ರೀಕರಣ ನಡೆದಿರುವ ಶಂಕೆ
ವಿಡಿಯೋ ಚಿತ್ರೀಕರಣಕ್ಕೆ ಬಳಸಲಾಗಿದ್ದ ಮೂಲ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಹೆಚ್ಚಿನ ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಈ ಘಟನೆ 2011ರಲ್ಲಿ ನಡೆದಿದೆ ಎಂದು ಹೇಳಲಾಗಿದ್ದರೂ, ವಿಡಿಯೋವನ್ನು ಸುಮಾರು 12 ವರ್ಷಗಳ ಬಳಿಕ, ಅಂದರೆ 2023ರಲ್ಲಿ ಚಿತ್ರೀಕರಿಸಲಾಗಿದೆ ಎಂಬ ಮಹತ್ವದ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ವಿಡಿಯೋ ಹಿಂದಿನ ಉದ್ದೇಶದ ಬಗ್ಗೆ ತನಿಖೆ
ವಿಡಿಯೋವನ್ನು ಯಾವ ಸಂದರ್ಭದಲ್ಲಿ ಮತ್ತು ಯಾವ ಉದ್ದೇಶದಿಂದ ಸೃಷ್ಟಿಸಲಾಯಿತು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದರ ಹಿಂದೆ ಯಾರ ಪಾತ್ರವಿದೆ ಮತ್ತು ವಿಡಿಯೋ ಸೃಷ್ಟಿಯಲ್ಲಿ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.
ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ವಿಡಿಯೋ ಸೃಷ್ಟಿಯ ಹಿಂದಿನ ಉದ್ದೇಶ ಹಾಗೂ ಸಂಬಂಧಪಟ್ಟವರ ಪಾತ್ರದ ಕುರಿತು ಮುಂದಿನ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.















