ಚಿಕ್ಕಮಗಳೂರು: ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಚಿಕ್ಕಮಗಳೂರು: ಬಾಬಾಬುಡನ್‌ಗಿರಿಯ ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವ್ಯವಸ್ಥಾಪನಾ ಸಮಿತಿ ರಚನೆ ಮಾಡುವಂತೆ ಹಲವು ವರ್ಷಗಳ ಹೋರಾಟ ನಡೆಯುತ್ತಿದ್ದು, ಕೊನೆಗೂ ಸರ್ಕಾರ ಎಂಟು ಮಂದಿ ಸದಸ್ಯರ ವ್ಯವಸ್ಥಾಪನಾ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ವ್ಯವಸ್ಥಾಪನಾ ಸಮಿತಿಯಲ್ಲಿ ಒಬ್ಬ ಮುಸ್ಲಿಂ ಸದಸ್ಯ ಇರಲಿದ್ದಾರೆ. ಮೂರು ವರ್ಷಗಳ ಅವಧಿಗೆ ಸಮಿತಿಯನ್ನು ರಚಿಸಲಾಗಿದೆ.

ಹೈಕೋರ್ಚ್‌ ಆದೇಶದಂತೆ ಆಡಳಿತ ಮಂಡಳಿ ನೇಮಕ ಮಾಡಲಾಗಿದೆ ಎಂದು ಶುಕ್ರವಾರದಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸತೀಶ್‌, ಸಿ.ಜಿ. ಲೀಲಾ, ಶೀಲಾ, ಸುಮಂತ್‌, ಜಿ.ಎಚ್‌.ಹೇಮಂತ್‌ಕುಮಾರ್‌, ಕೆ.ಎಸ್‌.ಗುರುವೇಶ್‌, ಎಸ್‌.ಎಂ.ಬಾಷಾ, ಸಿ.ಎನ್‌.ಚೇತನ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದಾರೆ. ಸದಸ್ಯರು ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರುವುದು ಕಂಡು ಬಂದಲ್ಲಿ ಅಂತಹವರ ಸದಸ್ಯತ್ವವು ರದ್ದಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಆಡಳಿತ ಮಂಡಳಿಯ ಕಾರ್ಯದರ್ಶಿ ಎಂದು ನೇಮಕ ಮಾಡಲಾಗಿದೆ. ಮೊದಲ ಸಭೆಯಲ್ಲಿ ಸದಸ್ಯರೆಲ್ಲಾ ಸೇರಿ ಒಬ್ಬರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಾಗಿದೆ.

 

ದತ್ತಪೀಠದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಅರ್ಚಕರು ಹಾಗೂ ಮುಜಾವರ್‌ ಅವರನ್ನು ನೇಮಕ ಮಾಡಬೇಕಾಗಿದ್ದು, ದತ್ತಪೀಠದಲ್ಲಿ ನಿತ್ಯ ಪೂಜೆ ಸಲ್ಲಿಸಲು ಆಗಮ ಶಾಸ್ತ್ರದಲ್ಲಿ ನುರಿತರಾದ ಹಿಂದೂ ಅರ್ಚಕರ ನೇಮಕವಾಗಬೇಕಾಗಿದೆ.