ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ. ಹೀಗಾಗಿ ಜನರು ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ವಿನಂತಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಭರ್ತಿಯಾಗಿದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಸೋಂಕಿನ ಲಕ್ಷಣ ಇರುವವರು ನಿರ್ಲಕ್ಷ್ಯ ಮಾಡಬಾರದು. ಲಕ್ಷಣ ಇದ್ದರೂ ಹತ್ತು ಹದಿನೈದು ದಿನ ಮನೆಯಲ್ಲೇ ಇದ್ದು ಕೊರೊನಾ ಉಲ್ಬಣಿಸಿದ ಬಳಿಕ ನೇರ ಐಸಿಯುಗೆ ಬರುವವರ ಸಂಖ್ಯೆ ಹೆಚ್ಚುತ್ತಲೆ ಇದೆ. ಹೀಗೆ ಮಾಡಬೇಡಿ. ತಕ್ಷಣ ಬಂದು ಟೆಸ್ಟ್ ಮಾಡಿಸಿ ಎಂದು ಮನವಿ ಮಾಡಿದ್ದಾರೆ.
ಮನೆಯ ಒಬ್ಬರಿಗೆ ಸೋಂಕು ಬಂದರೆ ಎಲ್ಲರಿಗೂ ಸೋಂಕು ಹರಡುತ್ತದೆ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಆದ್ದರಿಂದ ಸಂಬಂಧಿಕರು ಮತ್ತು ಬಂಧುಗಳೇ ಮನೆಗೆ ಬಂದರೂ ಸಾಮಾಜಿಕ ಅಂತರ ಪಾಲಿಸಬೇಕು. ಹೆಚ್ಚಿನ ಮುಂಜಾಗೃತೆ ಕ್ರಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.