ಬೆಂಗಳೂರು: ಕೋವಿಡ್ ಎರಡನೇ ಅಲೆಯಿಂದ ಅರ್ಧಕ್ಕೇ ಸ್ಥಗಿತವಾಗಿದ್ದ ಬಿಗ್‌ಬಾಸ್ ರಿಯಾಲಿಟಿ ಶೋನ ಎಂಟನೇ ಆವೃತ್ತಿ ಶೀಘ್ರದಲ್ಲೇ ಪುನರಾರಂಭವಾಗುವ ಬಗ್ಗೆ ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಹಾಗೂ ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಸುಳಿವು ನೀಡಿದ್ದಾರೆ.
ಬಿಗ್‌ಬಾಸ್ 8ನೇ ಆವೃತ್ತಿಯ ಎರಡನೇ ಇನಿಂಗ್ಸ್ ಇದೇ ಜೂನ್‌ನಲ್ಲೇ ಆರಂಭವಾಗುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಗುಂಡ್ಕಲ್, ‘ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯ ಎಂದು ಉಲ್ಲೇಖಿಸಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದ ವೇಳೆ ಮುಂಜಾಗ್ರತಾ ಕ್ರಮವಾಗಿ ಮೇ 8ರಂದು ಬಿಗ್‌ಬಾಸ್ 8ನೇ ಆವೃತ್ತಿ ಸ್ಥಗಿತಗೊಳಿಸುವ ನಿರ್ಧಾರವನ್ನು ಕಲರ್ಸ್ ಕನ್ನಡ ಚಾನೆಲ್ ತೆಗೆದುಕೊಂಡಿತ್ತು. ಬಿಗ್‌ಬಾಸ್ ಕನ್ನಡ ಆವೃತ್ತಿಯ ಇತಿಹಾಸದಲ್ಲೇ ಈ ರೀತಿ ಶೋ ಅರ್ಧಕ್ಕೇ ತಿಂತಿರುವ ಘಟನೆ ಇದೇ ಮೊದಲಾಗಿತ್ತು. ಕೋವಿಡ್ ಕಾರಣದಿಂದಾಗಿ 2020ರಲ್ಲಿ ಬಿಗ್‌ಬಾಸ್ ನಡೆದಿರಲಿಲ್ಲ. ಪ್ರಸ್ತುತ ನಡೆಯುತ್ತಿರುವ ಎಂಟನೇ ಆವೃತ್ತಿ ಪೂರ್ಣಗೊಂಡ ಕೂಡಲೇ ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ 9ನೇ ಆವೃತ್ತಿ ನಡೆಸುವುದಕ್ಕೂ ಕಲರ್ಸ್ ಕನ್ನಡ ಚಿಂತನೆ ನಡೆಸಿದೆ ಎನ್ನಲಾಗಿದೆ.