ಪುರಕ್ಕಾಡ್: ಕೇರಳದ ಪುರಕ್ಕಾಡ್ನಲ್ಲಿ ಸಮುದ್ರವು ಏಕಾಏಕಿ ತೀರದಿಂದ ಸುಮಾರು 50 ಮೀಟರ್ ಹಿಂದೆ ಸರಿದಿದ್ದು ಕರಾವಳಿ ನಿವಾಸಿಗರಲ್ಲಿ ಭಯ ಹುಟ್ಟಿಸಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಅಯ್ಯಂಕೋಯಿಕ್ಕಲ್ನಿಂದ ಪುರಕ್ಕಾಡ್ ಬೀಚ್ನ ದಕ್ಷಿಣಕ್ಕೆ ಎಸ್ಡಿವಿ ಶಾಲೆಯವರೆಗೆ 500 ಮೀಟರ್ ಉದ್ದದ ತೀರದುದ್ದಕ್ಕೂ ಸಮುದ್ರವು ಹಿಂದೆಸರಿದಿದೆ.
ಮಂಗಳವಾರ ಬೆಳಿಗ್ಗೆ 6.30 ಕ್ಕೆ ಈ ವಿದ್ಯಮಾನ ಘಟಿಸಿದ್ದು, ಜನರು ಆತಂಕಗೊಂಡಿದ್ದಾರೆ. 2004 ರ ಸುನಾಮಿ ಸಂದರ್ಭದಲ್ಲೂ ಇಂತಹ ವಿದ್ಯಾಮಾನ ನಡೆದಿತ್ತು ಎಂದು ಸ್ಥಳೀಯರು ನೆನಪಿಸಿಕೊಂಡಿದ್ದಾರೆ.
ಸಮುದ್ರ ಹಿಂದಕ್ಕೆ ಸರಿದಿರುವ ಕಾರಣ ದಡದಲ್ಲಿ ಹೂಳು ತುಂಬಿರುವುದರಿಂದ ಪುರಕ್ಕಾಡ್ ಕರಾವಳಿಗೆ ಮೀನುಗಾರಿಕಾ ದೋಣಿಗಳು ಬರಲು ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಸ್ಥಳೀಯ ಮೀನುಗಾರರು ಮಾತನಾಡಿದ್ದು, ಇದೊಂದು ನಿಯಮಿತ ವಿದ್ಯಮಾನವಾಗಿದ್ದು ಪ್ರತಿವರ್ಷವೂ ಸಮುದ್ರ ಹಿಂದೆ ಸರಿಯುವ ಘಟನೆ ನಡೆಯುತ್ತದೆ. ಭರತ-ಇಳಿತ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ, ಎರಡು ಮೂರು ದಿನಗಳು ಇದೇ ರೀತಿ ಇದ್ದು ಮತ್ತೆ ಸ್ಥಿತಿ ಸಾಮಾನ್ಯವಾಗುತ್ತದೆ ಎಂದಿದ್ದಾರೆ.
ಕೇರಳದ ವಿಪತ್ತು ನಿರ್ವಹಣಾ ಘಟಕವು ಇದು ಸುನಾಮಿ ಸಂಬಂಧಿತ ವಿದ್ಯಮಾನ ಅಲ್ಲ, ಆದಾಗ್ಯೂ ಈ ಘಟನೆಗೆ ಕಾರಣಗಳೇನು ಎನ್ನುವುದನ್ನು ಪತ್ತೆ ಹಚ್ಚುವುದಾಗಿ ತಿಳಿಸಿದೆ.