ಮೈಸೂರು: ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ ರಾಮಲಲ್ಲಾ ಮೂರ್ತಿಯನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಸೋಮವಾರದಂದು ಶಂಕುಸ್ಥಾಪನೆ ಮಾಡಲಾಯಿತು.
ನೋಡಿದರೆ ಮತ್ತೆ ಮತ್ತೆ ನೋಡಬೇಕಿನಿಸುವಷ್ಟು ಮುದ್ದಾಗಿರುವ ಈನೂತನ ವಿಗ್ರಹವು 150-200 ಕೆಜಿ ತೂಕದ ಕಲ್ಲಿನಿಂದ ಮಾಡಲ್ಪಟ್ಟಿದೆ. ವಿಗ್ರಹವು ಐದು ವರ್ಷದ ಬಾಲಕ ರಾಮ ನಿಂತಿರುವ ಭಂಗಿಯಲ್ಲಿದೆ.
ದೇಶದ ಇತರ ಇಬ್ಬರು ನುರಿತ ಕುಶಲಕರ್ಮಿಗಳಾದ ಬೆಂಗಳೂರಿನ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯ ನಾರಾಯಣ ಪಾಂಡೆ ಅವರೊಂದಿಗೆ ಅರುಣ್ ಯೋಗಿರಾಜ್ ಅವರಿಗೆ ಶ್ರೀರಾಮನ ಮಗುವಿನ ರೂಪವನ್ನು ಬಿಂಬಿಸುವ ಪ್ರತಿಮೆಗಳನ್ನು ರಚಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಮೈಸೂರು ಮೂಲದ ಯೋಗಿರಾಜ್ ಅವರು ಕೆತ್ತಿರುವ ರಾಮಲಲ್ಲಾ ಮೂರ್ತಿಯನ್ನು ಮೂರು ವಿಗ್ರಹಗಳ ಪೈಕಿ ಟ್ರಸ್ಟ್ ಆಯ್ಕೆ ಮಾಡಿದೆ ಎಂದು ರಾಮಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದರು.
ಯೋಗಿರಾಜ್ ಅವರು ತಮ್ಮ ತಂಡದೊಂದಿಗೆ 51 ಇಂಚಿನ ವಿಗ್ರಹವನ್ನು ಕೆತ್ತಲು ಕರ್ನಾಟಕದ ಮೈಸೂರು ಜಿಲ್ಲೆಯ ಎಚ್ಡಿ ಕೋಟೆ ತಾಲೂಕಿನ ಬುಜ್ಜೇಗೌಡನಪುರ ಗ್ರಾಮದ ವಿಶಿಷ್ಟವಾದ ಕೃಷ್ಣ ಶಿಲೆಯನ್ನು ಬಳಸಿದ್ದಾರೆ.
ದಕ್ಷಿಣ ಭಾರತದಾದ್ಯಂತ ಇರುವ ದೇವಾಲಯಗಳಲ್ಲಿರುವ ಹೆಚ್ಚಿನ ದೇವತೆಗಳ ವಿಗ್ರಹಗಳನ್ನು ನೆಲ್ಲಿಕಾರು ಬಂಡೆಗಳ ಶಿಲೆಗಳಿಂದ ಕೆತ್ತಲಾಗುತ್ತದೆ. ಕೃಷ್ಣನಂತೆಯೇ ಇರುವ ಬಣ್ಣದಿಂದಾಗಿ ಕೃಷ್ಣ ಶಿಲೆ ಎಂದು ಕರೆಯಲ್ಪಡುತ್ತವೆ.
ಉತ್ತಮ ಗುಣಮಟ್ಟದ ಕೃಷ್ಣಶಿಲೆಯು ಎಚ್ಡಿ ಕೋಟೆ ಮತ್ತು ಮೈಸೂರಿನಲ್ಲಿ ಹೇರಳವಾಗಿ ಲಭ್ಯವಿದೆ. ಹೆಚ್ಚಾಗಿ ಅರಗನ್ನು ಒಳಗೊಂಡಿರುವ ಮೃದುವಾದ ಸ್ವಭಾವದಿಂದಾಗಿ ಕಲ್ಲುಗಳನ್ನು ಸುಲಭವಾಗಿ ಶಿಲ್ಪಗಳಾಗಿ ಕೆತ್ತಬಹುದು. ಕಲ್ಲಿನ ವಿಶಿಷ್ಟ ಗುಣವೆಂದರೆ ಕ್ವಾರಿಗಳಿಂದ ತೆಗೆದ ಕೂಡಲೇ ಅವು ಮೃದುವಾಗಿರುತ್ತದೆ, ಆದರೆ 2-3 ವರ್ಷಗಳ ನಂತರ ಗಟ್ಟಿಯಾಗುತ್ತದೆ.
ಮೈಸೂರು ಸಮೀಪದ ಎಚ್.ಡಿ.ಕೋಟೆ ಕೃಷ್ಣ ಶಿಲೆಗಳ ನಿಕ್ಷೇಪಗಳ ಕೇಂದ್ರವಾಗಿದೆ. ನಗರದ ಸಮೀಪದಲ್ಲಿ ಲಭ್ಯವಿರುವ ಕಲ್ಲಿನ ನಿಕ್ಷೇಪಗಳ ಹೇರಳವಾದ ಲಭ್ಯತೆಯಿಂದಾಗಿ ಮೈಸೂರು ಕೃಷ್ಣ ಶಿಲೆ ಕಲ್ಲಿನ ಕೆತ್ತನೆಗೆ ಪ್ರಸಿದ್ದಿ ಪಡೆದಿದೆ. ಎಲ್ಲಾ ಶಿಲ್ಪಗಳನ್ನು ಮುಖ್ಯವಾಗಿ ಮೈಸೂರು ಮತ್ತು ಸುತ್ತಮುತ್ತಲಿನ ಹಲವಾರು ದೇವಾಲಯಗಳಲ್ಲಿ ಬಳಸಲಾಗುತ್ತದೆ ಮತ್ತು ಭಾರತದ ಎಲ್ಲಾ ಸ್ಥಳಗಳಿಗೆ ಕಳುಹಿಸಲಾಗುತ್ತದೆ.
ಕಲ್ಲು ಮೃದುವಾಗಿರುವುದರಿಂದ ಒರಟು ಮತ್ತು ಸಂಕೀರ್ಣವಾದ ಕೆತ್ತನೆಗಳನ್ನು ವಿವಿಧ ಗಾತ್ರದ ಸುತ್ತಿಗೆ, ಉಳಿ ಬಳಸಿ ಸೂಕ್ಷ್ಮ ಕೆತ್ತನೆಗಳನ್ನು ನಡೆಸಬಹುದು.
ಮೈಸೂರಿನ ಕೃಷ್ಣಶಿಲೆಯ ಕಲ್ಲಿನ ಕೆತ್ತನೆಗಳಿಗೆ ಹಲವು ಶತಮಾನಗಳ ಇತಿಹಾಸವಿದ್ದು, ಕಾಲಕಾಲಕ್ಕೆ ರಾಜಮನೆತನಗಳು ಇವನ್ನು ಪೋಷಿಸಿವೆ.
ಅರುಣ್ ಯೋಗಿರಾಜ್ ಅವರಿಗೆ ಕಲ್ಲಿನ ಕೆತ್ತನೆಯಲ್ಲಿ ಐದು ತಲೆಮಾರುಗಳ ಅನುಭವವಿದೆ. ಅರುಣ್ ಅವರ ಅಜ್ಜ ಬಸವಣ್ಣ ಶಿಲ್ಪಿ ಮೈಸೂರು ರಾಜರಿಂದ ಪೋಷತರಾಗಿದ್ದ ಶಿಲ್ಪಿಯಾಗಿದ್ದರು. ಅರುಣ್ ಯೋಗಿರಾಜ್ ಅಯೋಧ್ಯೆಯಲ್ಲಿ ಕಳೆದ ಆರರಿಂದ ಏಳು ತಿಂಗಳ ಕಾಲದಿಂದ ದಿನಕ್ಕೆ 12 ಗಂಟೆಗಳ ಕಾಲ ರಾಮ್ ಲಲ್ಲಾ ಪ್ರತಿಮೆಗಳನ್ನು ಪೂರ್ಣಗೊಳಿಸಲು ಅನವರತ ಕೆಲಸ ಮಾಡಿದ್ದಾರೆ.