ಸದೃಢ ಪಕ್ಷ ಸಂಘಟನೆಯಲ್ಲಿ ಮಹಿಳಾ ಮೋರ್ಚಾದ ಪಾತ್ರ ಮಹತ್ವಪೂರ್ಣ: ಕುಯಿಲಾಡಿ

ಉಡುಪಿ: ಇಂದು ಎಲ್ಲಾ ಸ್ತರಗಳಲ್ಲಿ ಮಹಿಳೆಯರಿಗೆ ವಿಶೇಷ ಜವಾಬ್ದಾರಿ ಇದೆ. ಸಮೃದ್ಧ, ಸದೃಢ ಭಾರತ ನಿರ್ಮಾಣದತ್ತ ಪಕ್ಷದ ಸಂಸ್ಥಾಪಕರು ಕಂಡ ಕನಸನ್ನು ನನಸಾಗಿಸುವಲ್ಲಿ ಸಂಘಟಿತ ಶ್ರಮ ಅತ್ಯವಶ್ಯಕ. ಸದೃಢ ಪಕ್ಷ ಸಂಘಟನೆಯಲ್ಲಿ ಮಹಿಳಾ ಮೋರ್ಚಾದ ಪಾತ್ರ ಮಹತ್ವಪೂರ್ಣವಾಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಅಧ್ಯಕ್ಷತೆಯಲ್ಲಿ ಎ.13 ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾಕಾರಿಣಿ ಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆ ಸದೃಢವಾಗಿದೆ.

ದೇಶದ ಭದ್ರತೆ ಮತ್ತು ಸಮಗ್ರತೆಗೆ ಒತ್ತು ನೀಡುವ ಜೊತೆಗೆ ಜನಪರ ಆಡಳಿತದ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ.

ಅಭಿವೃದ್ಧಿಯ ಶಾಖೆಯು ನಿರಂತರವಾಗಿ ಮುಂದುವರಿಯಲು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸರಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಜೊತೆಗೆ ಸರಕಾರದ ಉತ್ತಮ ಸಾಧನೆಗಳ ಮೇಲೆ ಬೆಳಕು ಚೆಲ್ಲುವುದು ಇಂದಿನ ಅಗತ್ಯತೆಯಾಗಿದೆ ಎಂದು ಕುಯಿಲಾಡಿ ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಎಮ್. ಸುವರ್ಣ ಮಾತನಾಡಿ, ಸಾರ್ಥಕ ಚಟುವಟಿಕೆಗಳ ಮೂಲಕ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ರಾಜ್ಯದಲ್ಲೇ ಒಂದು ಮಾದರಿ ಮಹಿಳಾ ಮೋರ್ಚಾ ಎಂದೆನಿಸಿದೆ. ಮಹಿಳಾ ಮೋರ್ಚಾ ಪ್ರತೀ ಬೂತ್ ನಲ್ಲೂ ಮಹಿಳಾ ಕಾರ್ಯಕರ್ತರ ತಂಡವನ್ನು ಸಕ್ರಿಯಗೊಳಿಸಿ, ಸರಕಾರದ ಯೋಜನೆಗಳ ಪ್ರಚಾರ ಹಾಗೂ ಸಶಕ್ತ ಬೂತ್ ನಿರ್ಮಾಣಕ್ಕೆ ಒತ್ತು ನೀಡುವ ಮೂಲಕ ಮುಂದಿನ ಚುನಾವಣೆಗೆ ಸಜ್ಜಾಗಬೇಕು ಎಂದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಮಾತನಾಡಿ, ಎ.19 ರಂದು ಪೋಷಣ್ ಅಭಿಯಾನವನ್ನು ಜಿಲ್ಲೆಯಾದ್ಯಂತ ಎಲ್ಲಾ ಮಹಾ ಶಕ್ತಿ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗುವುದು. ಸದ್ಯದಲ್ಲೇ ಗುಡಿ ಕೈಗಾರಿಕೆಗಳ ಬಗ್ಗೆ ಉಪಯುಕ್ತ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗುವುದು. ಚುನಾವಣಾ ವರ್ಷದಲ್ಲಿರುವ ಈ ಸನ್ನಿವೇಶದಲ್ಲಿ ಪಕ್ಷ ನೀಡುವ ಎಲ್ಲಾ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಲು ಜಿಲ್ಲಾ ಮಹಿಳಾ ಮೋರ್ಚಾ ಸರ್ವ ಸನ್ನದ್ಧವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸಮಿತಿಯ ನಾಮ ನಿರ್ದೇಶಿತ ಸದಸ್ಯೆ ನೀರಜಾ ಯು. ಶೆಟ್ಟಿ, ಜಿಲ್ಲಾ ಕಾರಾಗೃಹ ಸಂದರ್ಶನ ಮಂಡಳಿ ಸದಸ್ಯೆ ದಯಾಶಿನಿ ಪಂದುಬೆಟ್ಟು ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಮಾಲತಿ ಶ್ರೀಯಾನ್ ಇವರನ್ನು ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.

ಉಡುಪಿ ನಗರಸಭಾ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಮಹಿಳಾ ಮೋರ್ಚಾ ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರುಗಳಾದ ಸರೋಜಾ ಶೆಟ್ಟಿಗಾರ್ ಉಡುಪಿ ನಗರ, ವಸಂತಿ ಪೂಜಾರಿ ಉಡುಪಿ ಗ್ರಾಮಾಂತರ, ಸುಮಾ ಶೆಟ್ಟಿ ಕಾಪು, ಮಾಲಿನಿ ಶೆಟ್ಟಿ ಕಾರ್ಕಳ, ರೂಪಾ ಪೈ ಕುಂದಾಪುರ, ಭಾಗೀರತಿ ಸುರೇಶ್ ಬೈಂದೂರು ಹಾಗೂ ಮಂಡಲ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಷ್ಮಿತಾ ಬಾಲಕೃಷ್ಣ ಶೆಟ್ಟಿ ವರದಿ ಮಂಡಿಸಿ, ಪ್ರಮೀಳಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಡೆಕಾರು ವಂದಿಸಿದರು.