ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪಾತ್ರ ಮುಖ್ಯ: ನ್ಯಾ. ಶರ್ಮಿಳಾ

ಉಡುಪಿ, ಮಾ.8: ಮಹಿಳೆ ಸಮಾಜದ ಶಕ್ತಿ ಹಾಗೂ ಕುಟುಂಬದ ಕಣ್ಣು. ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸುತ್ತಿದ್ದು, ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಸಾಧನೆಯ ಛಾಪು ಮೂಡಿಸಿದ್ದಾಳೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಹೇಳಿದರು.

ಅವರು ಇಂದು ನಗರದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಮಿಷನ್, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ಜಿಲ್ಲಾ ಮತ್ತು ತಾಲೂಕು ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟ, ಸಂಜೀವಿನಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಎನ್.ಯು.ಎಲ್.ಎಮ್) ಹಾಗೂ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ವ- ಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಬೆರಳಣಿಕೆಯಷ್ಟು ಮಹಿಳೆಯರು ಮಾತ್ರ ಮನೆಯಿಂದ ಹೊರಬಂದು  ದುಡಿಯುತ್ತಿದ್ದರು. ಆದರೆ ಪ್ರಸ್ತುತ ಗಡಿ ಕಾಯುವುದರಿಂದ ಹಿಡಿದು ಕುಟುಂಬದ ಪ್ರತಿಯೊಂದು ಕೆಲಸವನ್ನೂ ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ಕೆಲಸವನ್ನೂ ನಿರ್ವಹಿಸುವ ಶಕ್ತಿ, ತಾಳ್ಮೆ, ಉತ್ಸಾಹ ಮಹಿಳೆಗಿದೆ. ಆದರೆ ಇದರ ಮಧ್ಯೆಯೂ ಕೌಟುಂಬಿಕ ದೌರ್ಜನ್ಯಕ್ಕೆ ಹಲವು ಮಂದಿ ಮಹಿಳೆಯರು ಬಲಿಯಾಗುತ್ತಿದ್ದು, ಅವರಿಗೆ ಧೈರ್ಯ ನೀಡಿ, ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕಿದೆ.

ಮಹಿಳೆಯ ಸಾಮರ್ಥ್ಯ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಮತ್ತು ಅವಳನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ನಾಗರೀಕ ಸಮಾಜದ ಮುಖ್ಯ ಗುಣವಾಗಬೇಕು. ಮಹಿಳೆಯರು ಸಂವಿಧಾನ ನೀಡಿರುವ ಹಕ್ಕುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಸಮಾಜದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಪಾಲುದಾರಿಕೆ ಅಧಿಕವಾಗಬೇಕು.

ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ನ ವಿವಿಧ ಚಟುವಟಿಕೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದು, ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವ- ಸಹಾಯ ಸಂಘಕ್ಕೆ ಕೃಷಿ ಯಂತ್ರೋಪಕರಣ ವಿತರಣೆ, ಚಿಕ್ಕಿ ಘಟಕ ಸ್ಥಾಪನೆ, ಸಂಚಾರಿ ಕ್ಯಾಂಟೀನ್ ಆರಂಭಕ್ಕೆ ಆರ್ಥಿಕ ನೆರವು, ಡ್ರೈವಿಂಗ್ ತರಬೇತಿ ಮುಂತಾದವುಗಳನ್ನು ನೀಡಲಾಗುತ್ತಿದೆ. ಮಹಿಳೆಯರು ಸಬಲರಾಗಿ, ಸಂಘಟಿತರಾಗಿ, ಜಾಗೃತರಾಗಬೇಕು. ನಾಗರೀಕ ಸೇವೆಗಳಲ್ಲಿ ಜಿಲ್ಲೆಯ ಮಹಿಳೆಯರು ಸೇರ್ಪಡೆಯಾಗುವ ಬಗ್ಗೆ ತಮ್ಮ ಹೆಣ್ಣು ಮಕ್ಕಳಿಗೆ ಈಗಿನಿಂದಲೇ ಪ್ರೇರೇಪಣೆ ನೀಡಬೇಕು ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಜೀವಿನಿ ಯೋಜನೆಯ ಕುರಿತು ಉಡುಪಿ ಜಿಲ್ಲಾ ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಎಸ್.ಡಿ.ಎಂ. ಆರ್ಯುವೇದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ನವೀನ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸಂಜೀವಿನಿ ಗುಂಪಿನ ಮಹಿಳೆಯರಿಗೆ ಚಾಲನಾ ಪರವಾನಗಿ ವಿತರಣೆ, ಮಹಿಳಾ ಸ್ವ- ಸಹಾಯ ಸಂಘಕ್ಕೆ ಟ್ಯಾಕ್ಟರ್ ವಿತರಣೆ, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಸಂಜೀವಿನಿ ಒಕ್ಕೂಟದ ಮಹಿಳೆಯರನ್ನು ಗೌರವಿಸಲಾಯಿತು. ಅಸಾಧಾರಣ ಪ್ರತಿಭಾ ಪ್ರಶಸ್ತಿ ಪಡೆದ ಮಕ್ಕಳಿಗೆ ಸನ್ಮಾನ, ಅತ್ಯುತ್ತಮ ಮಹಿಳಾ ಮಂಡಲಕ್ಕೆ ಸನ್ಮಾನಿಸಲಾಯಿತು. ಸ್ವ- ಸಹಾಯ ಸಂಘಗಳ ಉತ್ಪನ್ನಗಳ ಮಾರಾಟ ಮಳಿಗೆಗಳ ಉದ್ಘಾಟನೆ ನಡೆಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕ  ಬಾಬು, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಜಗದೀಶ್, ರುಡ್‌ಸೆಟ್ ನಿರ್ದೇಶಕ ಪಾಪಾ ನಾಯ್ಕ್, ವಿವಿಧ ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳಾದ ಶೀಲಾ ಕೆ ಶೆಟ್ಟಿ, ಯಶೋಧಾ ಶೆಟ್ಟಿ, ರಾಧಾದಾಸ್, ಶೋಭಾ ಕಲ್ಕೂರಾ, ವಸಂತಿ ಅಂಬಲಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ವಂದಿಸಿದರು.