ಉಡುಪಿ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಿರ್ಮಿಸಲ್ಪಡುವ ಶ್ರೀರಾಮಮಂದಿರದ ನಿರ್ಮಾಣ ಕಾರ್ಯವನ್ನು ಎಲ್ ಆ್ಯಂಡ್ ಟಿ ಮತ್ತು ಟಾಟಾ ಸಂಸ್ಥೆಗೆ ನೀಡಲಾಗಿದೆ ಎಂದು ರಾಮಮಂದಿರ ನಿರ್ಮಾಣ ಟ್ರಸ್ಟ್ ನ ವಿಶ್ವಸ್ಥರು ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಉತ್ತರಭಾರತ ತೀರ್ಥಕ್ಷೇತ್ರದ ಪ್ರವಾಸ ಕೈಗೊಂಡಿರುವ ಶ್ರೀಗಳು ಅಯೋಧ್ಯೆ ಭೇಟಿ ನೀಡಿದ್ದಾರೆ. ಇಂದು ರಾಮಮಂದಿರ ನಿರ್ಮಾಣದ ಕುರಿತ ಸಭೆಯಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ರಾಮಮಂದಿರ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಲಾಗಿದೆ. ಕಾಮಗಾರಿಯ ಮೇಲುಸ್ತುವಾರಿಯನ್ನು ಟಾಟಾ ಕಂಪನಿ ಗೆ ಒಪ್ಪಿಸಲಾಗಿದೆ. ಈ ಎರಡು ಜವಾಬ್ದಾರಿಯನ್ನು ಎರಡು ಕಂಪನಿಗಳು ಒಪ್ಪಿಕೊಂಡಿದೆ ಎಂದರು.
ಪೇಜಾವರ ಮಠದ ಶಾಖಾ ಮಠ ಮಧ್ವಾಶ್ರಮ ಪ್ರಮೋದ ವನದಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾದ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ವಿಶ್ವಸ್ಥರಾದ ಡಾ. ಅನಿಲ್ ಮಿಶ್ರಾ, ದಿನೇಶ್ಚಂದ್ರ, ನಿವೃತ್ತ ಮುಖ್ಯ ಇಂಜಿನಿಯರ್ ಜಗದೀಶ್ ಅವರು ಟ್ರಸ್ಟ್ನ ಅನೌಪಚಾರಿಕ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ತಿಳಿಸಿದರು.












