ಬಿಹಾರ: ದೇಶದ ಅತಿ ಉದ್ದದ ಉಕ್ಕಿನ ಸೇತುವೆ ‘ಮಹಾತ್ಮ ಗಾಂಧಿ ಸೇತು’ ಪುನರ್ನಿರ್ಮಾಣ; ಇಂದಿನಿಂದ ಸಾರ್ವಜನಿಕರಿಗೆ ಮುಕ್ತ

ಬಿಹಾರ: ದೇಶದ ಅತಿ ಉದ್ದದ ಉಕ್ಕಿನ ಸೇತುವೆ ‘ಮಹಾತ್ಮ ಗಾಂಧಿ ಸೇತು’ ಇಂದಿನಿಂದ ಕಾರ್ಯಾಚರಿಸಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಮರುನಿರ್ಮಾಣಗೊಂಡ ಸೇತುವೆಯನ್ನು ರಾಜ್ಯದ 12 ಕೋಟಿ ಜನರಿಗೆ ಸಮರ್ಪಿಸಲಿದ್ದಾರೆ.

ಗಂಗಾ ನದಿಯ ಮೇಲೆ ನಿರ್ಮಿಸಲಾದ ಗಾಂಧಿ ಸೇತು, ದಕ್ಷಿಣದ ಪಾಟ್ನಾವನ್ನು ಉತ್ತರದ ಹಾಜಿಪುರಕ್ಕೆ ಸಂಪರ್ಕಿಸುತ್ತದೆ. ಸೇತುವೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು, ಬಿಹಾರಕ್ಕೆ ನೀಡಲಾದ ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿಯಲ್ಲಿ 1,742 ಕೋಟಿ ರೂಪಾಯಿಗಳಲ್ಲಿ ಮರುನಿರ್ಮಾಣ ಮಾಡಿದೆ.

ಘನ ವಾಹನಗಳ ದಟ್ಟಣೆಯಿಂದಾಗಿ ಉಂಟಾಗುತ್ತಿದ್ದ ಟ್ರಾಫಿಕ್ ಅವ್ಯವಸ್ಥೆಯನ್ನು ಎದುರಿಸುತ್ತಿದ್ದ ಎರಡೂ ಬದಿಯ ಪ್ರಯಾಣಿಕರಿಗೆ ಅಗತ್ಯವಾಗಿ ಬೇಕಾಗಿದ್ದ ಪರಿಹಾರವನ್ನು ಈ ಶೆತುವೆ ಒದಗಿಸಲಿದೆ. ಸೇತುವೆಯನ್ನು ಮೂಲತಃ 1982 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಉದ್ಘಾಟಿಸಿದ್ದರು. 2016 ರಲ್ಲಿ ಮೋದಿ ಸರ್ಕಾರವು ಅಂದಾಜು 1,742 ಕೋಟಿ ರೂಪಾಯಿ ವೆಚ್ಚದಲ್ಲಿ ಚತುಷ್ಪಥ ಸೇತುವೆಯ ಪುನರ್ನಿರ್ಮಾಣಕ್ಕೆ ಅನುಮೋದನೆ ನೀಡುವ ಮೊದಲು, 5.57 ಕಿಮೀ ಉದ್ದದ ಸೇತುವೆಯು ಸರಿಯಾದ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಯಲ್ಲಿತ್ತು.