ಭಾರತೀಯ ಪರಂಪರೆಯಲ್ಲಿ ತುಳಸಿ ಗಿಡಕ್ಕೆ ದೈವಿಕ ಸ್ಥಾನವನ್ನು ನೀಡಲಾಗಿದೆ. ತುಳಸಿ ಗಿಡವು ಆರೋಗ್ಯವರ್ಧಕವಾಗಿರುವುದರಿಂದ ಗಿಡಮೂಲಿಕೆಗಳಲ್ಲಿ ಅದಕ್ಕೆ ‘ರಾಣಿ’ಯ ಸ್ಥಾನಮಾನವನ್ನು ನೀಡಲಾಗಿದೆ.
ಒತ್ತಡ ಶಮನಕಾರಿ:
ತುಳಸಿಯ ಹೊಂದಿಕೆಯ ಗುಣ ಅದ್ಭುತವಾಗಿದ್ದು ಅದು ದೈಹಿಕ ಮತ್ತು ಭಾವನಾತ್ಮಕ ಒತ್ತಡಕ್ಕೆ ಹೊಂದಿಕೊಳ್ಳುತ್ತದೆ ಮಾತ್ರವಲ್ಲ ಒತ್ತಡವನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ. ಇದು ಬಾಹ್ಯ ಒತ್ತಡ- ಉಂಟುಮಾಡುವ ಅಂಶಗಳ ಪ್ರಭಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ಮನಸ್ಸು ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ತುಳಸಿಯ ಶಾಂತಗೊಳಿಸುವ ಗುಣಲಕ್ಷಣಗಳು ಮನಸ್ಸಿನಲ್ಲಿ ಕ್ಷೇಮದ ಭಾವವನ್ನು ಸೃಷ್ಟಿಸುತ್ತದೆ, ಸಂಘರ್ಷ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ತುಳಸಿಯನ್ನು ಗ್ರೀನ್ ಟೀ ರೂಪದಲ್ಲಿ ಸೇವಿಸುವ ಮೂಲಕ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ತುಳಸಿಯಲ್ಲಿ ವಿಟಮಿನ್ ಕೆ ಇದೆ ಮತ್ತು ಬಾಯಿಯ ಆರೋಗ್ಯಕ್ಕೂ ತುಳಸಿ ಒಳ್ಳೆಯದು.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ತುಳಸಿಯು ಮನಸ್ಸು, ದೇಹ ಮತ್ತು ಆತ್ಮದ ಸರ್ವರೋಗಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಮನುಕುಲ ಎದುರಿಸುತ್ತಿರುವ ಹಲವಾರು ವಿವಿಧ ಸಮಸ್ಯೆಗಳಿಗೆ ಪರಿಹಾರವನ್ನು ತುಳಸಿ ನೀಡಬಲ್ಲದು. ತುಳಸಿಯ ಸೇವನೆಯು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ ವಿವಿಧ ರೋಗ ಮತ್ತು ಸೋಂಕಿನಿಂದ ರಕ್ಷಿಸುತ್ತದೆ. ತುಳಸಿಯನ್ನು ಪುದಿನಾ, ಶುಂಠಿ, ಅರಶಿನ ಮುಂತಾದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಿಕೆಗಳೊಂದಿಗೆ ಸಂಯೋಜಿಸಿದಾಗ ಇದರ ಪರಿಣಾಮ ಇನ್ನೂ ಹೆಚ್ಚಾಗುತ್ತದೆ. ಈ ಸಂಯೋಜನೆಗಳು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ಶಮನದ ಗುಣಲಕ್ಷಣಗಳನ್ನು ಹೊಂದಿವೆ, ಇದು ಸಾಮಾನ್ಯ ಕೆಮ್ಮು ಮತ್ತು ಶೀತದ ಅಪಾಯವನ್ನು ತಪ್ಪಿಸುವುದಲ್ಲದೆ ರೋಗಲಕ್ಷಣಗಳನ್ನು ನಿರ್ವಹಿಸುತ್ತದೆ. ಸಕ್ಕರೆ ಕಾಯಿಲೆಗೂ ತುಳಸಿ ಚಹಾ ಅತ್ಯಂತ ಪರಿಣಾಮಕಾರಿ.
ಚಯಾಪಚಯವನ್ನು ವರ್ಧಿಸುತ್ತದೆ:
ತುಳಸಿಯು ಚಯಾಪಚಯವನ್ನು ವರ್ಧಿಸುವುದರಿಂದ ತೂಕ ಇಳಿಸಿಕೊಳ್ಳಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಚಯಾಪಚಯ ಕ್ರಿಯೆಯು ವೇಗವಾದಷ್ಟೂ ಬೊಜ್ಜನ್ನು ಕರಗಿಸುವುದು ಸುಲಭವಾಗುತ್ತದೆ. ದೈವೀ ಗುಣಗಳಿಂದ ಸಮೃದ್ದವಾಗಿರುವ ಮೂಲಿಕೆಯು ನೈಸರ್ಗಿಕವಾಗಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ, ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ತುಳಸಿಯನ್ನು ಜೇನು ಮತ್ತು ನಿಂಬೆ ಅಥವಾ ನಿಂಬೆ ಮತ್ತು ಶುಂಠಿಯೊಂದಿಗೆ ಸೇವಿಸಿದಾಗ ಅದು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಮತ್ತು ಆಹಾರದಿಂದ ದೇಹಕ್ಕೆ ಪೌಷ್ಟಿಕಾಂಶದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವ್ಯಾಯಾಮಕ್ಕೂ ಮುಂಚಿತವಾಗಿ ತುಳಸಿ ಗ್ರೀನ್ ಟೀ ಸೇವಿಸುವುದು ಶಕ್ತಿ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ.
ತುಳಸಿಯ ಅಸಂಖ್ಯಾತ ಪ್ರಯೋಜನಗಳನ್ನು ತಿಳಿದುಕೊಂಡು ನಮ್ಮ ಪೂರ್ವಿಕರು ಅದಕ್ಕೆ ದೈವತ್ವದ ಪಟ್ಟವನ್ನು ನೀಡಿದ್ದಾರೆ. ಬೆಳಗ್ಗೆದ್ದು ತುಳಸಿಗೆ ನೀರು ಹಾಕುತ್ತಾ ಸೂರ್ಯನಮಸ್ಕಾರ ಮಾಡಿದಲ್ಲಿ ದೇಹ, ಮನಸ್ಸು ಮತ್ತು ಆತ್ಮದ ಸಮಸ್ತ ಸಮಸ್ಯೆಗಳು ಪರಿಹಾರವಾಗುತ್ತವೆ.
ವಿ.ಸೂ: ಈ ಲೇಖನ ಕೇವಲ ಮಾಹಿತಿಗಾಗಿ ಮಾತ್ರ. ತುಳಸಿಯನ್ನು ದೈನಂದಿನ ಆಹಾರಕ್ರಮದಲ್ಲಿ ಬಳಸುವ ಮುನ್ನ ತಜ್ಞರ ಜೊತೆ ಸಮಾಲೋಚಿಸುವುದು ಒಳಿತು.