ನವದೆಹಲಿ: ದೆಹಲಿಯಲ್ಲಿ ನಿರ್ಮಿಸಲಾಗುವ ನೂತನ ಸಂಸತ್ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಶೃಂಗೇರಿ ಮಠದ ಪುರೋಹಿತರು ಭೂಮಿಪೂಜೆಗೆ ಸಂಬಂಧಿಸಿದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಸಂಪುಟದ ಸಚಿವರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಹಲವು ದೇಶಗಳ ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
900 ರಿಂದ 1200 ಸಂಸತ್ ಸದಸ್ಯರು ಕುಳಿತುಕೊಳ್ಳುವಂತಹ ಸಾಮರ್ಥ್ಯವಿರುವ ಈ ಭವನದ ಒಟ್ಟು ವಿಸ್ತೀರ್ಣ 64,500 ಚದರ ಮೀಟರ್. ₹971 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಸಂಸತ್ ಭವನದ ನಿರ್ಮಾಣ ಕಾರ್ಯ 2022ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಂಪರೆಯನ್ನು ಸಾರುವ ‘ಸಂವಿಧಾನ ಸಭಾಂಗಣ’, ಸಂಸದರಿಗಾಗಿ ವಿಶ್ರಾಂತಿ ಕೋಣೆ, ಗ್ರಂಥಾಲಯ, ವಿವಿಧ ಸಮಿತಿಗಳು ಸಭೆ ನಡೆಸಲು ಕೊಠಡಿಗಳು, ಭೋಜನಶಾಲೆ ಹಾಗೂ ವಿಶಾಲ ಪಾರ್ಕಿಂಗ್ ಸ್ಥಳವನ್ನು ಈ ನೂತನ ಕಟ್ಟಡ ಹೊಂದಿರಲಿದೆ.