PUBG ಪ್ರೇಮ ಪ್ರಕರಣ: ಪಾಕಿಸ್ತಾನಿ ಗೂಢಾಚಾರಿಣಿ ಶಂಕೆ; ಉತ್ತರ ಪ್ರದೇಶದ ಎಟಿಎಸ್ ಬಲೆಯಲ್ಲಿ ಸೀಮಾ ಹೈದರ್

ಹೊಸದಿಲ್ಲಿ: PUBG ಆನಲೈನ್ ಗೇಮ್ ನಲ್ಲಿ ಭೇಟಿಯಾದ ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಗುಲಾಮ್ ಹೈದರ್ ಅನ್ನು ಉತ್ತರ ಪ್ರದೇಶ ಎಟಿಎಸ್ ಪೊಲೀಸರು ಬಂಧಿಸಿದ್ದಾರೆ. ಏತನ್ಮಧ್ಯೆ, ಆಕೆ ದೆಹಲಿಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಳು ಎಂದು ನೋಯ್ಡಾ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದು, ಭಾರತದ ಸಚಿನ್ ಮೀನಾ ಎಂಬ ವ್ಯಕ್ತಿಯನ್ನು 2019 ರಲ್ಲಿ ಆನ್‌ಲೈನ್ ಗೇಮ್ ಪ್ಲೇಯರ್ ಅನ್‌ನೌನ್ಸ್ ಬ್ಯಾಟಲ್‌ಗ್ರೌಂಡ್ಸ್ (PUBG) ಆಡುವಾಗ ಭೇಟಿಯಾಗಿದ್ದೇನೆ ಎಂದು ಹೇಳಿದ್ದಳು. ವೀಸಾ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಸೀಮಾಳನ್ನು ಬಂಧಿಸಲಾಗಿದ್ದು, ಸೋಮವಾರ ಉತ್ತರ ಪ್ರದೇಶ ಪೊಲೀಸರ ಭಯೋತ್ಪಾದನಾ ನಿಗ್ರಹ ದಳದಿಂದ ವಿಚಾರಣೆ ನಡೆಸಲಾಗಿತ್ತು.

ಸಚಿನ್ ಅನ್ನು ಮದುವೆಯಾಗಲು ದಾಖಲೆಗಳನ್ನು ತಯಾರಿಸಲು ವಕೀಲರ ಬಳಿ ಹೋದಾಗ, ಭಾರತೀಯಳಲ್ಲದ ಕಾರಣ ತಾನು ಈ ಮದುವೆಯಾಗುವುದು ಸಾಧ್ಯವಿಲ್ಲ ಎಂದು ವಕೀಲರು ತಿಳಿಸಿದ್ದರು. ತಾನು ಪಾಕಿಸ್ತಾನಿ ಎನ್ನುವ ವಿಷಯವನ್ನು ವಕೀಲರು ಪೊಲೀಸರಿಗೆ ತಿಳಿಸಬಹುದೆನ್ನುವ ಭಯದಿಂದ ಸಚಿನ್ ತಂದೆಯಿಂದ ಹಣ ಪಡೆದುಕೊಂಡು ಜೂನ್ 30 ರಂದು ಮಕ್ಕಳೊಂದಿಗೆ ದೆಹಲಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗಲೆ ತನ್ನ ಬಂಧನವಾಯಿತು ಎಂದು ಆಕೆ ತಿಳಿಸಿರುವುದಾಗಿ ನೋಯ್ಡಾ ಪೊಲೀಸರು ತಿಳಿಸಿದ್ದಾರೆ.

ಆಕೆ ಭಾರತಕ್ಕೆ ಬಂದ ಸುದ್ದಿಯಾದಾಗಿನಿಂದಲೂ ಆಕೆ ಪಾಕಿಸ್ತಾನ ಪರ ಗೂಢಾಚಾರಿಣಿ ಎನ್ನುವ ಶಂಕೆ ವ್ಯಕ್ತವಾಗುತ್ತಲೇ ಇತ್ತು. ಮಾತ್ರವಲ್ಲದೆ ಆಕೆಯ ಸಂಬಂಧಿ ಮತ್ತು ಸಹೋದರ ಪಾಕಿಸ್ತಾನದ ಸೇನೆಯಲ್ಲಿರುವುದು ಅನುಮಾನವನ್ನು ಹೆಚ್ಚಿಸಿತ್ತು. ಇದೀಗ ಸಚಿನ್ ಮತು ಸೀಮಾ ಇಬ್ಬರನ್ನೂ ಹೆಚ್ಚಿನ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ಸಚಿನ್‌ನಿಂದ ವಶಪಡಿಸಿಕೊಂಡಿರುವ ಹಾನಿಗೊಳಗಾದ ಮೊಬೈಲ್ ಫೋನ್‌ನಿಂದ ಡೇಟಾವನ್ನು ಮರುಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.