ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಆನ್ ಲೈನ್ ತಂತ್ರಜ್ಞಾನದ ಮೊರೆಹೋಗಿದೆ. ಸಂಸ್ಥೆಯು ಮುಂದಿನ ಸೆಮಿಸ್ಟರ್ ಸಂಪೂರ್ಣ ಆನ್ ಲೈನ್ ನಲ್ಲಿ ಮಾಡಲು ಮುಂದಾಗಿದೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ ಮುಂಬೈನ ಐಐಟಿ ನಿರ್ದೇಶಕ ಸುಭಾಶಿಸ್ ಚೌಧರಿ, ಈಗಾಗಲೇ ಆನ್ ಲೈನ್ ಶಿಕ್ಷಣದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದು, ಮುಂದಿನ ಸೆಮಿಸ್ಟರ್ ಸಂಪೂರ್ಣವಾಗಿ ಆನ್ ಲೈನ್ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಉತ್ತಮ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.
ನಾವು ಹೆಚ್ಚೆಚ್ಚು ಆನ್ಲೈನ್ ತರಗತಿಗಳನ್ನು ನಡೆಸಲು ಚಿಂತನೆ ನಡೆಸಿದ್ದೇವೆ. ಅದರ ವಿವರಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ತಿಳಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.
ನಮ್ಮ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಭಾಗವು ಆರ್ಥಿಕವಾಗಿ ಕಡಿಮೆ ಸವಲತ್ತು ಪಡೆದ ಕುಟುಂಬಗಳಿಂದ ಬಂದಿದೆ ಮತ್ತು ಈ ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಅವರನ್ನು ಐಟಿ ಹಾರ್ಡ್ವೇರ್ನೊಂದಿಗೆ ಸಜ್ಜುಗೊಳಿಸಲು ಸಹಾಯ ಹಸ್ತ ಬೇಕಾಗುತ್ತದೆ. ಈ ಪ್ರಕಾಶಮಾನವಾದ ಯುವ ಮನಸ್ಸುಗಳಿಗೆ ಯಾವುದೇ ಅಡೆತಡೆಗಳು ಅಥವಾ ವಿಳಂಬಗಳಿಲ್ಲದೆ ತಮ್ಮ ಕಲಿಕೆಯನ್ನು ಮುಂದುವರಿಸಲು ಸಹಾಯ ಮಾಡಲು ನಿಮ್ಮ ಅಗಾಧ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಮನವಿಮಾಡಿಕೊಂಡಿದ್ದಾರೆ.