ಮಂಗಳೂರು: ಕೊಂಕಣಿಯ ಕಲೆ, ಸಾಹಿತ್ಯ, ಸಂಸ್ಕೃತಿಯ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ, ಗಿನ್ನೆಸ್ ದಾಖಲೆ ಬರೆದ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಸಿನೆಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಅಸ್ಮಿತಾಯ್ ಚಲನಚಿತ್ರವನ್ನು ನಿರ್ಮಿಸಿದ್ದು ಈ ಸಿನೆಮಾವು ಸೆಪ್ಟೆಂಬರ್ 15 ರಂದು ತೆರೆ ಕಾಣಲಿದೆ.
ಈ ಬಗ್ಗೆ ಚಿತ್ರತಂಡವು ಗುರುವಾರದಂದು ನಗರದ ಕೆನರಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಚಿತ್ರದ ಬಗ್ಗೆ ಮಾಹಿತಿ ನೀಡಿದ ತಂಡವು, ಕೊಂಕಣಿ ಜನರ ಅಸ್ಮಿತೆಯ ಹುಡುಕಾಟದ ಎಳೆಯೊಂದಿಗೆ ಸಾಗುವ ಕತೆಯು ಗೋವಾದಿಂದ ವಲಸೆ ಹಾಗೂ ಕೊಂಕಣಿಯ ಶ್ರೀಮಂತ ಜನಪದ ಪರಂಪರೆಯ ದೃಶ್ಯ ವೈಭವವನ್ನು ನವಿರಾದ ಪ್ರೇಮಕತೆಯೊಂದಿಗೆ ತೋರಿಸುತ್ತದೆ ಎಂದಿತು.
ಎರಿಕ್ ಒಝೇರಿಯೊ ಬರೆದ ಮೂಲಕತೆಗೆ ಜೊಯೆಲ್ ಪಿರೇರಾ ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದು, ಯುವ ನಿರ್ದೇಶಕ ವಿಲಾಸ್ ರತ್ನಾಕರ್ ಕ್ಷತ್ರಿಯ ನಿರ್ದೇಶನ ಮಾಡಿದ್ದಾರೆ. ಬಾಲರಾಜ ಗೌಡ ಸುಂದರವಾಗಿ ಸೆರೆ
ಹಿಡಿದ ಕರಾವಳಿ, ಮಲೆನಾಡು ಮತ್ತು ಗೋವಾದ ದೃಶ್ಯಗಳನ್ನು ಮೇವಿನ್ ಜೊಯೆಲ್ ಪಿಂಟೊ ಉತ್ತಮವಾಗಿ ಸಂಕಲನ ಮಾಡಿದ್ದಾರೆ. ಆರು ಹಾಡುಗಳಿಗೆ ಆಲ್ವಿನ್ ಫೆರ್ನಾಂಡಿಸ್, ಕ್ಯಾಜಿಟನ್ ಡಾಯಸ್, ಜೊಯೆಲ್ ಪಿರೇರಾ ಹಾಗೂ ಎರಿಕ್ ಒಝೇರಿಯೊ ಮುದಗೊಳಿಸುವ ಸಂಗೀತ ರಚಿಸಿದ್ದು, ಪ್ರಸಿದ್ಧ ಗಾಯಕ ನಿಹಾಲ್ ತಾವ್ರೊ ಹಾಗೂ ಇತರೆ ಗಾಯಕರು ದನಿಗೂಡಿಸಿದ್ದಾರೆ. ಡೆನಿಸ್ ಮೊಂತೇರೊ, ಅಶ್ವಿನ್ ಡಿಕೊಸ್ತಾ, ವೆನ್ಸಿಟಾ ಡಾಯಸ್, ಪ್ರಿನ್ಸ್ ಜೇಕಬ್, ಸಾಯಿಶ್ ಪನಂದಿಕರ್, ಗೌರೀಶ್ ವೆರ್ಣೆಕರ್, ಸ್ಟ್ಯಾನಿ ಆಲ್ವಾರಿಸ್, ನೆಲ್ಲು ಪೆರ್ಮನ್ನೂರ್, ಸುನೀಲ್
ಸಿದ್ದಿ, ಲುಲು ಫೊರ್ಟೆಸ್, ನವೀನ್ ಲೋಬೊ ಹೀಗೆ ಗೋವಾ ಮತ್ತು ಮಂಗಳೂರಿನ ಖ್ಯಾತ ಕಲಾವಿದರು ಪ್ರಮುಖ ಭೂಮಿಕೆಯಲ್ಲಿದ್ದಾರೆ. ಸುಮಾರು 500 ಕ್ಕೂ ಮಿಕ್ಕಿ ಕಲಾವಿದರು ಪ್ರಥಮ ಬಾರಿಗೆ ಕ್ಯಾಮರಾದ ಮುಂದೆ ಕಾಣಿಸಲಿದ್ದಾರೆ.
ಈ ಚಿತ್ರವು ಸೆಪ್ಟೆಂಬರ್ 15 ರಿಂದ ಪ್ರದರ್ಶನಗೊಳ್ಲಲಿದ್ದು, ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ 2 ದೇಖಾವೆಗಳು ಹಾಗೂ ಸಿನೆ ಗ್ಯಾಲಕ್ಸಿ ಸುರತ್ಕಲ್, ಭಾರತ್ ಸಿನೆಮಾಸ್ ಪಡುಬಿದ್ರಿ, ಭಾರತ್ ಸಿನೆಮಾಸ್ ಮಣಿಪಾಲ, ಭಾರತ್ ಸಿನೆಮಾಸ್ ಪುತ್ತೂರು, ಭಾರತ್ ಟಾಕೀಸ್ ಬೆಳ್ತಂಗಡಿ ಮತ್ತು ಪ್ಲಾನೆಟ್ ಕಾರ್ಕಳ ಇಲ್ಲಿ ತಲಾ ಒಂದು ದೇಖಾವೆ ಮತ್ತು ಕಲ್ಪನಾ ಟಾಕೀಸ್ ಉಡುಪಿ ಹಾಗೂ ಪದ್ಮಾಂಜಲಿ ಟಾಕೀಸ್ ಹೊನ್ನಾವರದಲ್ಲಿ ತಲಾ ನಾಲ್ಕು ದೇಖಾವೆಗಳು ಪ್ರದರ್ಶನಗೊಳ್ಳಲಿವೆ.
ನಂತರ ಬೆಂಗಳೂರು, ಮುಂಬಯಿ, ಗೋವಾ ಹಾಗೂ ಯುಎಇ, ಕುವೈತ್, ಖತಾರ್, ಬಹ್ರೈನ್, ಓಮನ್, ಇಸ್ರಾಯೆಲ್, ಜರ್ಮನಿ, ಆಸ್ಟ್ರೇಲಿಯಾ, ಆಯರ್ಲೆಂಡ್, ಅಮೇರಿಕಾ ಮತ್ತಿತರ ದೇಶಗಳಲ್ಲಿ ಪ್ರದರ್ಶನಕ್ಕೆ ಸ್ಥಳೀಯ ಸಹಕಾರದಲ್ಲಿ ಏರ್ಪಾಡು ಮಾಡಲಾಗುವುದು. ಜನರ ಕೋರಿಕೆ ಮೇರೆಗೆ ಇತರ ಕಡೆಗಳಲ್ಲೂ ಪ್ರದರ್ಶನಕ್ಕೆ ಅವಕಾಶವಿರಲಿದೆ. ಸೆಪ್ಟೆಂಬರ್ 10 ರಂದು ಮಂಗಳೂರಿನ ಬಿಜಯ್, ಪುತ್ತೂರು ಹಾಗೂ ಮಣಿಪಾಲದ ಭಾರತ್ ಸಿನೆಮಾದಲ್ಲಿ ಸಂಜೆ 4.00 ಗಂಟೆಗೆ ಏಕ ಕಾಲದಲ್ಲಿ ಮೂರು ಕಡೆ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ. ಮಂಗಳೂರಿನ ಪ್ರದರ್ಶನವನ್ನು ಗೋವಾದ ಶಾಸಕ ದಂಪತಿ ಮೈಕಲ್ ಲೋಬೊ, ಡಿಲಾಯ್ಲಾ ಲೋಬೊ ಉದ್ಘಾಟಿಸಲಿದ್ದಾರೆ.
`ಚಲನಚಿತ್ರದಿಂದ ಚಳುವಳಿ’ ಎಂಬ ಧ್ಯೇಯದೊಡನೆ ಮಾಂಡ್ ಸೊಭಾಣ್ ಈ ಚಿತ್ರವನ್ನು ಜನರ, ದಾನಿಗಳ ಸಹಕಾರದಿಂದ ನಿರ್ಮಿಸಿದ್ದು ಅಧ್ಯಕ್ಷ ಲುವಿಸ್ ಜೆ ಪಿಂಟೊ ನಿರ್ಮಾಣದ ಉಸ್ತುವಾರಿ ವಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎರಿಕ್ ಒಝೆರಿಯೊ, ಲುವಿಸ್ ಜೆ. ಪಿಂಟೊ, ಜೊಯೆಲ್ ಪಿರೇರಾ, ಡೆನಿಸ್ ಮೊಂತೇರೊ, ಅಶ್ವಿನ್ ಡಿಕೋಸ್ತಾ, ವೆನ್ಸಿಟಾ ಡಾಯಸ್, ನೆಲ್ಲು ಪೆರ್ಮನ್ನೂರ್, ಸ್ಟ್ಯಾನಿ ಅಲ್ವಾರಿಸ್ ಉಪಸ್ಥಿತರಿದ್ದರು.