ಮಲ್ಪೆ: ಮೀನುಗಾರರ ಬಲೆಗೆ ಬಿದ್ದ ಅತ್ಯಂತ ದುಬಾರಿ ಗೋಳಿ ಮೀನು 2 ಲಕ್ಷ ರೂ ಗೆ ಮಾರಾಟ

ಮಲ್ಪೆ: ಇಲ್ಲಿನ ಬಂದರಿನ ಮೀನುಗಾರರ ಬಲೆಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಗೋಳಿ ಮೀನು ಬಿದ್ದಿದೆ. ಈ ಮೀನು 22 ಕೆಜಿ ತೂಕವಿದ್ದು, ಬರೋಬ್ಬರಿ 2,34,080 ರೂಪಾಯಿಗಳಿಗೆ ಮಾರಾಟವಾಗಿದೆ. ಈ ಹಿಂದೆ ಶಾನ್ ರಾಜ್ ತೊಟ್ಟಂ ಎಂಬವರಿಗೆ 20 ಕೆಜಿ ತೂಕದ ಗೋಳಿ ಮೀನು ಸಿಕ್ಕಿ,ಇದು 1.90 ಲಕ್ಷ ರೂಪಾಯಿಗೆ ಮಾರಾಟವಾಗಿ ಸುದ್ದಿಯಾಗಿತ್ತು.

‘ಸಾಗರದ ಚಿನ್ನ’ ಎಂದುಕರೆಯಲ್ಪಡುವ ಘೋಲ್ ಮೀನು ಸ್ಥಳೀಯ ಭಾಷೆಯಲ್ಲಿ ಗೋಳಿ ಮೀನು ಎಂದು ಚಿರಪರಿಚಿತವಾಗಿದ್ದು, ಭಾರತದ ಅತ್ಯಂತ ದುಬಾರಿ ಮೀನುಗಳಲ್ಲಿ ಒಂದಾಗಿದೆ. ಈ ರೀತಿಯ ಮೀನುಗಳು ಅತ್ಯಂತ ಅಪರೂಪ ಮತ್ತು ವಿಭಿನ್ನವಾಗಿವೆ. ಈ ಮೀನಿನ ವೈಜ್ಞಾನಿಕ ಹೆಸರು ಪ್ರೋಟೋನಿಬಿಯಾ ಡಯಾಂಥಸ್. ಇದು ಪ್ರಾಥಮಿಕವಾಗಿ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರದ ನಿವಾಸಿಯಾಗಿದೆ. ಸಾಮಾನ್ಯವಾಗಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಹರಾಜಾಗುತ್ತದೆ.

ಮಾಂಸದ ಹೊರತಾಗಿ, ಮೀನಿನ ದೇಹದ ಭಾಗಗಳೂ ದುಬಾರಿಯಾಗಿದೆ. ಮೀನಿನ ಮೂತ್ರಕೋಶವನ್ನು ವೈನ್ ಉದ್ಯಮದಲ್ಲಿ ಬಳಸಲಾಗುತ್ತದೆ. ಗೋಳಿ ಮೀನಿಗೆ ಪೌಷ್ಟಿಕಾಂಶದ ಮೌಲ್ಯಗಳು ಮಾತ್ರವಲ್ಲದೆ ಅನೇಕ ಔಷಧೀಯ ಗುಣಗಳೂ ಇರುವುದರಿಂದ ಇದು ತುಂಬಾ ದುಬಾರಿ.

  • ಕೊಲ್ಲಾಜನ್ ಸಮೃದ್ಧವಾಗಿರುವ ಕಾರಣ ಇದನ್ನು ವಿವಿಧ ಸೌಂದರ್ಯವರ್ಧಕ ಉದ್ಯಮಗಳು ಮತ್ತು ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.
  • ಇದು ಮೂತ್ರಪಿಂಡದ ಕಲ್ಲುಗಳನ್ನು ಗುಣಪಡಿಸುತ್ತದೆ ಎಂದು ಜನರು ನಂಬುತ್ತಾರೆ.
  • ಪ್ರಪಂಚದ ಅನೇಕ ಭಾಗಗಳಲ್ಲಿ ವೈನ್ ತಯಾರಿಕೆಯಲ್ಲಿ ಇದರ ಮೂತ್ರಕೋಶವನ್ನು ಬಳಸಲಾಗುತ್ತದೆ.
  • ಮೀನಿನ ಹೃದಯವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
  • ಈ ಮೀನನ್ನು ಔಷಧೀಯ ಉದ್ಯಮದಲ್ಲಿ ಕರಗಿಸಬಹುದಾದ ಹೊಲಿಗೆಗಳನ್ನು ತಯಾರಿಸಲು ಬಳಸಲಾಗುತ್ತದೆ.

ಮಹಾರಾಷ್ಟ್ರದ ಪಾಲ್ಘರ್‌ನ ಮೀನುಗಾರರೊಬ್ಬರು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದಾಗ ಈ ಮೀನಿನ ಬೆಲೆ ಬೆಳಕಿಗೆ ಬಂದಿತ್ತು. ತನ್ನ ಬಲೆಗೆ ಬಿದ್ದಿದ್ದ 157 ಗೋಳಿ ಮೀನುಗಳು ಅವರನ್ನು ಬರೋಬ್ಬರಿ 1.33 ಕೋಟಿ ರೂ ನ ಒಡೆಯನ್ನಾಗಿಸಿತ್ತು.