ಬುಡಕಟ್ಟು ಜನರ ಸರ್ವಾಂಗೀಣ ಅಭಿವೃದ್ಧಿಗೆ ಮೋದಿ ಸರ್ಕಾರ ಕಟಿಬದ್ಧ: ವಿ. ಸುನಿಲ್ ಕುಮಾರ್

ಕಾರ್ಕಳ: ಪ್ರಧಾನಿ ನರೇಂದ್ರ ಮೋದಿ ಸರಕಾರದ 8ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ, ಕಾರ್ಕಳ ಬಿಜೆಪಿ ಎಸ್.ಟಿ.ಮೋರ್ಚಾ ವತಿಯಿಂದ ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಸಹಭಾಗಿತ್ವದಲ್ಲಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮ ಆರೋಗ್ಯ ತಪಾಸಣಾ ಶಿಬಿರವು ಮುದ್ರಾಡಿ ಗ್ರಾಪಂ ವ್ಯಾಪ್ತಿಯ ಕಬ್ಬಿನಾಲೆ ಮೇಲ್ಮಠ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಳೆದ 8 ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅತ್ಯುತ್ತಮ ಆಡಳಿತ ನೀಡಿದೆ. ಬುಡಕಟ್ಟು ಜನಾಂಗದ ಏಳಿಗೆಗಾಗಿ 3110 ವನ್ ಧನ್ ವಿಕಾಸ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ದೇಶದಾದ್ಯಂತ 384 ಏಕಲವ್ಯ ಮಾದರಿ ವಸತಿ ವಿದ್ಯಾಲಯ ಕಾರ್ಯಾಚರಿಸುತ್ತಿದೆ. ನವೆಂಬರ್ 15 ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಜನ್ಮ ದಿನವನ್ನು ಜನ್ ಜಾತೀಯ ಗೌರವ ದಿವಸ್ ಎಂದು ಘೋಷಿಸಲಾಗಿದೆ. ಬುಡಕಟ್ಟು ಜನರ ಸರ್ವಾಂಗೀಣ ಅಭಿವೃದ್ಧಿಗೆ ಮೋದಿ ಸರ್ಕಾರ ಕಟಿಬದ್ಧವಾಗಿದೆ ಎಂದರು.

ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ, ಉಜ್ವಲ ಯೋಜನೆ, ಗಡಿಯಲ್ಲಿ ಬಲಿಷ್ಠ ಮೂಲ ಸೌಕರ್ಯಕ್ಕೆ ಉತ್ತೇಜನ, ವಿಶ್ವದ ಅತೀ ದೊಡ್ಡ ಮತ್ತು ಅತೀ ವೇಗದ ಲಸಿಕೀಕರಣ ಅಭಿಯಾನದಿಂದ ದೇಶದ 87% ಕ್ಕೂ ಅಧಿಕ ಜನಸಂಖ್ಯೆಗೆ ಸಂಪೂರ್ಣ ಲಸಿಕೆ ವಿತರಣೆ, ಉಚಿತ ಪಡಿತರ ವ್ಯವಸ್ಥೆ ಸೇರಿದಂತೆ ಮೋದಿ ಸರ್ಕಾರವು ಹಲವಾರು ಜನಪರ, ಜನಸ್ನೇಹಿ ಆಡಳಿತ ನೀಡಿದೆ ಎಂದರು.

ಬಿಜೆಪಿ ಕಾರ್ಕಳ ಕ್ಷೇತ್ರ ಎಸ್. ಟಿ ಮೋರ್ಚಾದ ಅಧ್ಯಕ್ಷ ಕೆ.ಪಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಎಸ್ ಟಿ ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ ಚೇರ್ಕಾಡಿ, ಎಸ್. ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಿತ್ಯಾನಂದ ನಾಯ್ಕ, ಕಾರ್ಕಳ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ್ ಸಾಲ್ಯಾನ್, ನವೀನ್ ನಾಯಕ್, ಬಿಜೆಪಿ ಹೆಬ್ರಿ ಮಹಾಶಕ್ತಿಕೇಂದ್ರ ಅಧ್ಯಕ್ಷ ರಮೇಶ್ ಕುಮಾರ್, ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್, ಕಾರ್ಕಳ ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಬಿಜೆಪಿ ಮುದ್ರಾಡಿ ಶಕ್ತಿಕೇಂದ್ರ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುದ್ರಾಡಿ ಗ್ರಾ.ಪಂ ಅಧ್ಯಕ್ಷೆ ವಸಂತಿ, ವೈದ್ಯಾಧಿಕಾರಿಗಳಾದ ಡಾ.ಸುಶಾನ್ ಶೆಟ್ಟಿ, ಡಾ.ಸಿದ್ಧಾರ್ಥ್ ಶೆಟ್ಟಿ ಉಪಸ್ಥಿತರಿದ್ದರು.

ಬಿಜೆಪಿ ಕಾರ್ಕಳ ಕ್ಷೇತ್ರ ಎಸ್. ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ ಸ್ವಾಗತಿಸಿದರು, ಸೀತಾರಾಮ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು, ಎಸ್. ಟಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ಗೌಡ ವಂದಿಸಿದರು.