ರಾಜಕೀಯ ಪ್ರೇರಿತ ಹಿಜಾಬ್ ವಿವಾದದ ವಿದ್ಯಾರ್ಥಿನಿಯರ ಮುಖವಾಡ ಬಯಲು: ಯಶ್ ಪಾಲ್ ಸುವರ್ಣ

ಹಿಜಾಬ್ ವಿವಾದದ ಮೂಲಕ ದೇಶದಾದ್ಯಂತ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಹಾಳುಗೆಡವಲು ಯತ್ನಿಸುತ್ತಿರುವ ಮತೀಯವಾದಿಗಳ ರಾಜಕೀಯ ಮುಖವಾಡ ಇದೀಗ ಬಯಲಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಅರ್ಜಿ ಸಲ್ಲಿಸಿ ಹಿಜಾಬ್ ಧರಿಸಲು ಅವಕಾಶ ಕೋರಿ ಶೀಘ್ರ ತೀರ್ಪು ನೀಡುವಂತೆ ಮನವಿ ಮಾಡಿದ್ದ ವಿದ್ಯಾರ್ಥಿನಿಯರು ಇದೀಗ ಉತ್ತರ ಪ್ರದೇಶ ಸಹಿತ ಪಂಚ ರಾಜ್ಯಗಳ ಚುನಾವಣೆ ಮುಗಿಯುವವರೆಗೆ ವಿಚಾರಣೆ ನಡೆಸದಂತೆ ಹೈಕೋರ್ಟ್ ಮಧ್ಯಂತರ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಹೋರಾಟ ರಾಜಕೀಯ ಪ್ರೇರಿತ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಸಿಎಫ್ಐ ಹಾಗೂ ಎಸ್ ಡಿ ಪಿ ಐ ಪಕ್ಷದ ಕೈಗೊಂಬೆಗಳಾಗಿ ಮುಗ್ಧ ವಿದ್ಯಾರ್ಥಿಗಳೆಂಬ ಮುಖವಾಡ ಧರಿಸಿ ಹಿಜಾಬ್ ವಿವಾದ ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ, ದೇಶದ ಕೋಟ್ಯಾಂತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಳ್ಳಿಯಿಡಲು ಮುಂದಾಗಿದ್ದಾರೆ.

ಇನ್ನೂ ಮತದಾನದ ಹಕ್ಕು ಹೊಂದಿಲ್ಲದ ವಿದ್ಯಾರ್ಥಿನಿಯರು ಚುನಾವಣೆ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲು ಯತ್ನಿಸುವ ಮೂಲಕ ತಮ್ಮ ರಾಜಕೀಯ ಪ್ರೇರಿತ ಹಿಜಾಬ್ ವಿವಾದದ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ದೇಶದ ಮುಸ್ಲಿಂ ಮಹಿಳೆಯರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ದುರುದ್ದೇಶದಿಂದ ಹಿಜಾಬ್ ವಿವಾದದ ಮೂಲಕ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿತರಾಗಿ ಮನೆಯಲ್ಲಿ ಗುಲಾಮರನ್ನಾಗಿಸುವ ಷಡ್ಯಂತ್ರದ ಭಾಗವಾಗಿದ್ದು, ಈಗಾಗಲೇ ವಿದ್ಯಾವಂತ ಮುಸ್ಲಿಂ ಮಹಿಳೆಯರು ರಾಷ್ಟ್ರೀಯವಾದಿ ಚಿಂತನೆಯೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಸ್ವಾವಲಂಬಿಯಾಗಿರುವುದು ಮತೀಯವಾದಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಪಂಚ ರಾಜ್ಯಗಳ ಚುನಾವಣೆ ಮೇಲೆ ಬೀರಲಿರುವ ವ್ಯತಿರಿಕ್ತ ಪರಿಣಾಮ ಕಂಗೆಡಿಸಿದೆ.

ಈ ಮೂಲಕ ಈ ಮತೀಯವಾದಿ ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಗೆ ಬೆಂಗಾವಲಾಗಿ ನಿಂತಿರುವ ಸಿ ಎಫ್ ಐ, ಎಸ್ ಡಿ ಪಿ ಐ ಪಕ್ಷದ ರಾಜಕೀಯ ಷಡ್ಯಂತ್ರ ಬಯಲಾಗಿದ್ದು, ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿರುವ ಅಂತಾರಾಷ್ಟ್ರೀಯ ಮಟ್ಟದ ಹುನ್ನಾರದ ಹಿಜಾಬ್ ವಿವಾದದಲ್ಲಿ ರಾಷ್ಟ್ರ ವಿರೋಧಿಗಳೊಂದಿಗೆ ಕೈ ಜೋಡಿಸಿರುವ ವಿದ್ಯಾರ್ಥಿನಿಯರ ನಡೆಗೆ ದೇಶದ ಪ್ರಜ್ಞಾವಂತ ನಾಗರಿಕರು ತಕ್ಕ ಉತ್ತರ ನೀಡಲಿದ್ದು, ಈ ರಾಷ್ಟ್ರ ವಿರೋಧಿ ಮತೀಯವಾದಿಗಳ ವಿರುದ್ಧ ನಿರಂತರ ಹೋರಾಟ ರೂಪಿಸಲು ಬದ್ದ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.