ಹಲವು ರಾಜ್ಯಗಳಿಂದ ಪ್ರತಿರೋಧದ ಬಳಿಕವೂ ಭಾರತದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ ಅದಾಗಲೇ 160 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, 200 ಕೋಟಿ ಕ್ಲಬ್ ಸೇರಲು ತಯಾರಾಗಿದೆ. ಚಿತ್ರವು ಮೇ 12 ರಂದು 37 ದೇಶಗಳಲ್ಲಿ ಅಂತಾರಾಷ್ಟ್ರೀಯವಾಗಿ ಬಿಡುಗಡೆಯಾಗಿದೆ. ಕೇರಳ ಸ್ಟೋರಿಯ ಒಟ್ಟು ಕಲೆಕ್ಷನ್ ಈಗ 165.94 ಕೋಟಿ ರೂಗಳಾಗಿವೆ.
ಏತನ್ಮಧ್ಯೆ, ನೆದರ್ಲ್ಯಾಂಡ್ಸ್ನ ಚಿತ್ರಮಂದಿರಗಳಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ಕಾಣಲಿದೆ ಎಂದು ಅಲ್ಲಿನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್ ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ದ ನೇರ ಮತ್ತು ನಿಷ್ಠುರವಾಗಿರುವ ಗೀರ್ಟ್ ವೈಲ್ಡರ್ಸ್ ಆರಂಭದಿಂದಲೇ ದಿ ಕೇರಳ ಸ್ಟೋರಿಯನ್ನು ಬೆಂಬಲಿಸಿದ್ದರು. ಇದೀಗ ಚಿತ್ರವನ್ನು ಲಿಂಕ್ ಮೂಲಕ ವೀಕ್ಷಿಸಿರುವ ಅವರು ಚಿತ್ರವು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ.
“ಚಿತ್ರ ನಿರ್ದೇಶಕರಿಗೆ ತುಂಬಾ ಧನ್ಯವಾದಗಳು, ಸುದೀಪ್ತೋ ಸೇನ್, ನಿಮ್ಮ ಉತ್ತಮ ಚಲನಚಿತ್ರ ದಿ ಕೇರಳ ಸ್ಟೋರಿ ವೀಕ್ಷಿಸಲು ನನಗೆ ಲಿಂಕ್ ಕಳುಹಿಸಿದ್ದಕ್ಕಾಗಿ. ನೆದರ್ಲ್ಯಾಂಡ್ಸ್ನ ಚಲನಚಿತ್ರ ಮಂದಿರಗಳಲ್ಲಿ ಇದನ್ನು ತೋರಿಸಲಾಗುವುದು ಎಂದು ನನಗೆ ತುಂಬಾ ಸಂತೋಷವಾಗಿದೆ ಮತ್ತು ಡಚ್ ಸಂಸತ್ತಿಗೆ ನಿಮಗೆ ಸ್ವಾಗತವಿದೆ!” ಎಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಪಕ್ಷದ ನಾಯಕ, 1998 ರಿಂದ ಸಂಸದೀಯ ಸ್ಥಾನವನ್ನು ಹೊಂದಿರುವ ಗೀರ್ಟ್ ವೈಲ್ಡರ್ಸ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಈ ಮಧ್ಯೆ ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ಪಶ್ಚಿಮ ಬಂಗಾಳ ರಾಜ್ಯ ವಿಧಿಸಿದ್ದ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.